Thursday, October 28, 2010

"ದೇವರು ಕೊಟ್ಟ ತಂಗಿ"

"ದೇವರು ಕೊಟ್ಟ ತಂಗಿ"
ನಾನು ಬರೆಯಬೇಕೆಂದಿರುವ ಈ ಲೇಖನ ನನ್ನ ಜೀವನದಲ್ಲಿ ಬಹಳ ವರ್ಷಗಳ ಹಿಂದೆ ನಡೆದ ಒಂದು ಸುಮಧುರವಾದ ಘಟನೆ. ಅದನ್ನ ಈಗ ನಿಮ್ಮೆಲ್ಲರೊಡನೆ ಹಂಚಿಕೊಳ್ಳಬೇಕೆಂಬ ಮನಸ್ಸಾಗ್ತಾ ಇದೆ. ಹೇಗೆ ಆರಂಭಿಸಲಿ ಅಂತ ಗೊತ್ತಾಗ್ತಾ ಇಲ್ಲ. ಹೂ...ಹೀಗೆ.....
          ನಾವು ನಮ್ಮ ತಂದೆ-ತಾಯಿಗೆ ನಾಲ್ಕು ಜನ ಗಂಡು ಮಕ್ಕಳು. ಆದರೆ ಹೆಣ್ಣು ಮಕ್ಕಳಿಲ್ಲವೆಂಬ ಕೊರಗು ನಮ್ಮೆಲ್ಲರ ಮನಸ್ಸನ್ನು ಯಾವಾಗಲು ಕೊರೆಯುತ್ತಿತ್ತು. ನನಗೋ ಚಿಕ್ಕಂದಿನಿಂದ ಒಬ್ಬ ಪುಟ್ಟ ತಂಗಿ ಬೇಕೆಂದು  ಮನದಲ್ಲಿ ಸದಾ ಅನಿಸುತ್ತಿತ್ತು. ಹಾದಿಯಲ್ಲಿ ಹೋಗುವಾಗ, ಒಟ್ಟಾಗಿ ಆಡುವ ಪುಟ್ಟ ಅಣ್ಣ-ತಂಗಿಯರನ್ನು ನೋಡಿದಾಗ, ನನ್ನ ಗೆಳೆಯರ ಮನೆಗೆ ಹೋದಾಗ ಅವರು ತಮ್ಮ/ತಂಗಿಯರೊಡನೆ ಆಡುವ ಪ್ರೀತಿಯ ಜಗಳ ಕಂಡಾಗ, ರಕ್ಷಾಬಂಧನದಂದು ತಂಗಿ ಅಣ್ಣನ ಒಳಿತನ್ನು ಬಯಸಿ ರಾಖೀ ಕಟ್ಟುವಾಗ, ನಾಗರ ಪಂಚಮಿಯಂದು ಅಣ್ಣ-ತಂಗಿಯರು ಒಟ್ಟಾಗಿ ತನಿಯೆರೆಯುವಾಗ ನನ್ನ ಮನ ಮೂಕವೇದನೆ ಅನುಭವಿಸುತ್ತಿತ್ತು. ಯಾವಾಗಲು ನಾನು ದೇವರನ್ನು ಶಪಿಸುತ್ತಿದ್ದೆ, ಏಕೆ ನನಗೆ ಒಬ್ಬ ತಂಗಿಯನ್ನು ಕೊಡಲಿಲ್ಲ ಅಂತ.
          ನನ್ನ ಪದವಿ-ಪೂರ್ವ ವಿಧ್ಯಾಭ್ಯಾಸ ಮುಗಿಸಿ ಮುಂದೆ ಪದವೀಧರನಾಗುವ ಆಕಾಂಕ್ಷೆ ಹೊತ್ತು, ವಿಶ್ವ-ವಿದ್ಯಾಲಯದಲ್ಲಿ ಪ್ರವೇಶ ಪಡೆದೆ. ಶಾಲಾ-ಕಾಲೇಜಿನಲ್ಲಿ ಆಗದ ಅನುಭವಗಳು ವಿಶ್ವ-ವಿದ್ಯಾನಿಲಯದಲ್ಲಿ ಆಗಲಾರಂಭಿಸಿದವು. ನನ್ನ ಮೊದಲನೇ ವರ್ಷದ ಪದವಿ ಪರೀಕ್ಷೆ ಮುಗಿಸುವಷ್ಟರಲ್ಲಿ ಕೇವಲ ೪-೫ ಜನ ಆತ್ಮೀಯ ಗೆಳೆಯ/ಗೆಳತಿಯರ ಗುಂಪೊಂದು ಕಟ್ಟಿಕೊಡಿದ್ದೆ. ಅವರು ಇಂದಿಗೂ ನನ್ನ ಆಪ್ತ-ಸ್ನೇಹಿತರಾಗೆ ಇದ್ದಾರೆ. ಆ ನಾಲ್ಕು ಜನರಿಗು ಸೋದರಿ/ಸೋದರರಿದ್ದರು. ನಾನೊಬ್ಬ ಈ ವಿಷಯದಲ್ಲಿ ಗುಂಪಿಗೆ ಸೇರದ ವ್ಯಕ್ತಿಯಾಗಿದ್ದೆ.
ನನ್ನ ಎರಡನೇ ವರ್ಷದ ಪದವಿಯ ಮೊದಲ ದಿನಗಳಲ್ಲಿ ಒಂದು ದಿನ ಬೆಳಿಗ್ಗೆ (ಬಹುಶಃ 9/11/1989 ಅನ್ನಿಸುತ್ತೆ!!) ನಮ್ಮ ಗುಂಪಿನ ಒಬ್ಬ ಸ್ನೇಹಿತ ನನ್ನ ಹತ್ತಿರ ಬಂದು ಈ ಸಂಜೆ ಒಂದು ವಿಶೇಷ ಕಾದಿದೆ, ಸರಿಯಾಗಿ ೫.೩೦ಕ್ಕೆ ಒಂದು ಹೋಟೆಲಿನ ಹತ್ತಿರ ಬಾ ಅಂತ ಹೇಳಿದ. ನನಗೆ ಬೆಳಗಿನಿಂದಲೂ ಏನೋ ಆತುರ, ಕಾತರ. ಏನಿರಬಹುದು ಆ ವಿಶೇಷ ಅಂತ ತಲೆಯಲ್ಲಿ ನೂರೆಂಟು ಲೆಕ್ಕಾಚಾರ ಹಾಕಿದೆ. ಇಡೀ ದಿನ ತರಗತಿಗಳಲ್ಲಿ ಪಾಠ ಸಹ ಸರಿಯಾಗಿ ಕೇಳಲಾಗಲಿಲ್ಲ. ಅಂತೂ ಸಂಜೆ ೫.೩೦ ಆಗುವವರೆಗೂ ಹೇಗೋ ಆ ದಿನದೂಡಿ ಅವನು ಹೇಳಿದ್ದ ಹೋಟೆಲನ್ನು ತಲುಪಿದೆ.
          ಕೆಲವು ಕ್ಷಣಗಳ ಬಳಿಕ ನನ್ನ ಸ್ನೇಹಿತ ಒಂದು ಯುವತಿಯೊಡನೆ ನಾನು ಕುಳಿತಿದ್ದ ಟೇಬಲ್ ಬಳಿ ಬಂದು ಜೊತೆಯಲ್ಲಿದ್ದ ಯುವತಿಯನ್ನು ಪರಿಚಯಿಸಿ, ಈಕೆ ನನ್ನ "ಗೆಳತಿ" ಎಂದು ಹೇಳಿದ. ನಾನು ಆ ದಿನಗಳಲ್ಲಿ ಸ್ವಲ್ಪ ನಾಚಿಕೆ ಸ್ವಭಾವಿ ಹಾಗು ಮಿತಭಾಷಿಯಾಗಿದ್ದೆ. ಹೊಸಬರೊಡನೆ ಮಾತನಾಡಲು ಬಹಳ ಸಂಕೋಚವಾಗುತ್ತಿತ್ತು (ಈಗ ಹಾಗಿಲ್ಲ!!). ಆದರೂ ಅದೇನೋ, ಮೊದಲನೆ ನೋಟದಲ್ಲೆ ಆಕೆ ನನಗೆ ಬಹಳ ಪರಿಚಿತಳು ಅನ್ನಿಸುತ್ತಿತ್ತು. ಆತ್ಮೀಯತೆಯಿಂದ "ಹಲೋ" ಎಂದೆ. ಮೊದಲನೇ ಭೇಟಿಯಲ್ಲೆ ಆಕೆ ನನ್ನೊಡನೆ ಬಹಳ ಅಕ್ಕರೆಯಿಂದ ಮನಬಿಚ್ಚಿ ಮಾತನಾಡಿದಳು.
            ಹೀಗೆ ಯಾವಾಗಲಾದರೊಮ್ಮೆ ಆಗಾಗ್ಗೆ ನನ್ನ ಸ್ನೇಹಿತನೊಡನೆ ಅವಳ ಭೇಟಿ ಆಗುತ್ತಿತ್ತು. ಇಂತಹ ಕೆಲವು ಭೇಟಿಗಳಲ್ಲಿಯೇ ನಮ್ಮಲ್ಲಿ ಒಂದು ರೀತಿಯ ಅನುಬಂಧ ಬೆಳೆಯಲಾರಂಭಿಸಿತು. ಈ ನಡುವೆ, ನಾನು ಅವಳನ್ನು ನನ್ನ ತಂದೆ-ತಾಯಿ, ಅಣ್ಣ - ತಮ್ಮಂದಿರಿಗೆ ಪರಿಚಯಿಸಿದೆ. ಮೊದಲನೇ ಪರಿಚಯದಲ್ಲೆ ಅವಳು ನಮ್ಮ ತಂದೆ ತಾಯಿಯರನ್ನು "ಅಪ್ಪಾಜಿ - ಅಮ್ಮ" ಎಂದು ಕೂಗಿ ಕರೆದಾಗ ಅವರಿಗೂ ಬಹಳ ಆನಂದವಾಯಿತು. ಕೆಲ ಸಮಯದಲ್ಲಿಯೇ ಅವಳು ನಮ್ಮ ಮನೆಯ ಮಗಳಂತಾದಳು. ಮೆಲ್ಲನೆ ನನ್ನ ಮನದಲ್ಲಿ ತಂಗಿ ಇಲ್ಲವೆಂಬ ಭಾವನೆ ಓಡಿಹೋಗಿ, ಚಿಕ್ಕಂದಿನಿಂದಲೇ ನನಗೆ ಒಡಹುಟ್ಟಿದವಳಿದ್ದಾಳೆ ಎಂಬ ಭಾವನೆ ಬೆಳೆಯಲಾರಂಭಿಸಿತು. ಆ ನನ್ನ ತಂಗಿ ದಿನಾಂಕಗಳನ್ನು ನೆನಪಿತ್ತುಕೊಳ್ಳುವುದರಲ್ಲಿ ಅತೀ ನಿಪುಣೆಯಾಗಿದ್ದಳು. ನಮಗೆ ಪರೀಕ್ಷೆಗಳಿರುವ ದಿನ, ಜನ್ಮದಿನ, ರಾಖಿ ಹಬ್ಬದ ದಿನ ಮರೆಯದೆ ಶುಭಾಶಯ ಪತ್ರಗಳನ್ನು ಕಳಿಸುತ್ತಿದ್ದಳು. ಆ ವರ್ಷದ "ರಕ್ಷಾ ಬಂಧನ" ದಿನದಂದು ನನ್ನ ಕೈಗೆ ರಾಖೀ ಕಟ್ಟಿ ನಮ್ಮಿಬ್ಬರ ಅಣ್ಣ-ತಂಗಿಯರ ಸಂಬಂಧವನ್ನು ಇನ್ನೂ ಗಟ್ಟಿಗೊಳಿಸಿದ್ದಳು.
ಸುಖ-ದುಖಃಗಳು ಬಾಳಿನ ಎರಡು ಮುಖಗಳಿದ್ದಂತೆ. ಆಗಾಗ್ಗೆ ಕೆಲವು ದುಖಃಕರ ವಿಷಯಗಳು ಜೀವನದಲ್ಲಿ ನಮ್ಮ ಮನಸ್ಸನ್ನು ಗಟ್ಟಿಗೊಳಿಸುತ್ತವೆ. ತಂಗಿ ಸಿಕ್ಕಳು ಎಂದು ಸಂತೋಷಪಡುತ್ತಿದ್ದ ಕೆಲವೇ ತಿಂಗಳುಗಳಲ್ಲಿ ಒಂದು ದಿನ ನನ್ನ ಸ್ನೇಹಿತನ ಬಾಡಿದ ಮುಖ ಕಂಡು ನನಗೆ ಬಹಳ ಆತಂಕವಾಯಿತು.  ಅವನು ಹೇಳಿದ ಆ ವಿಷಯ ನನ್ನ ಮುಖವನ್ನು ಇನ್ನೂ ಕಳೆಗುಂದುವಂತೆ ಮಾಡಿತು. ನನ್ನ ಆ ತಂಗಿಯ ತಂದೆ ಸರ್ಕಾರಿ ಇಂಜೀನಿಯರ್. ಅವರಿಗೆ ಬಹಳ ವರ್ಷಗಳ ನಂತರ ದೂರದ ಊರಿಗೆ ವರ್ಗಾವಣೆಯಾಗಿತ್ತು. ಅವರು ಅದನ್ನು ತಪ್ಪಿಸಿಕೊಳ್ಳಲಾಗದೆ ತಮ್ಮ ಸಂಸಾರ ಸಮೇತ ಆ ಊರಿಗೆ ಹೋಗಲು ನಿರ್ಧರಿಸಿದ್ದರು. ನನ್ನ ಹಾಗು ನನ್ನ ಸ್ನೇಹಿತನ ಮನಸ್ಥಿತಿ ಒಂದೇ ಆಗಿತ್ತು. ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ "ಗೆಳತಿ"ಯಿಂದ ದೂರ ಇರಬೇಕಲ್ಲ ಅಂತ ಅವನ ವ್ಯಥೆಯಾದರೆ, ಕೇವಲ ಒಂದೇ ವರ್ಷದಲ್ಲಿ ತನ್ನ ಒಡಹುಟ್ಟಿದವರಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುವ ಆ "ತಂಗಿ" ಯಿಂದ ದೂರವಿರಬೇಕಲ್ಲ ಎಂಬುದು ನನ್ನ ವ್ಯಥೆ. ಆದರೂ ಬಂದದ್ದೆಲ್ಲ ಅನುಭವಿಸದೆ ಬೇರೆ ದಾರಿ ಇಲ್ಲವಲ್ಲ ಅಂತ ಒಲ್ಲದ ಮನಸ್ಸಿನಿಂದ ಅವಳಿಗೆ ವಿದಾಯ ಹೇಳಿ ಕಳುಹಿಸಿದೆವು.
          ಇಂಗ್ಲೀಷ್ನಲ್ಲಿ ಒಂದು ಹೇಳಿಕೆಯಿದೆ "Out of sight is Out of mind" ಅಂತ. ಆದರೆ ಇಲ್ಲಿ ಹಾಗಾಗಲಿಲ್ಲ. ಆಕೆ "ಕಂಗಳಿಂದ ದೂರ ಹೋದಷ್ಟು" ನಮ್ಮ ನಡುವಿನ ಪ್ರೀತಿ ಹೆಚ್ಚಾಯ್ತು. ಅವಳಿಂದ ನಿರಂತರವಾಗಿ ಪತ್ರಗಳು ಬರಲಾರಂಭಿಸಿದವು. ಆ ಕಾಲಕ್ಕೆ ದೂರವಾಣಿ ಬಹಳ ದುಬಾರಿಯಾದ್ದರಿಂದ ಅವಳ ಪತ್ರಕ್ಕಾಗಿ ವಾರಕ್ಕೊಮ್ಮೆ ಅಂಚೆಯವನ ದಾರಿ ಕಾಯುವುದು ನನ್ನ ನಿರಂತರ ಅಭ್ಯಾಸವಾಯಿತು. ರಾಖಿ ಹಬ್ಬದ ದಿನ ಮರೆಯದೇ ಆ ಊರಿನಿಂದ ನಮ್ಮ ಮನೆಗೆ ಬಂದು ನನಗೆ "ರಕ್ಷಾಬಂಧನ" ಕಟ್ಟಿ ಹರಸಿ ಹೋಗುತ್ತಿದ್ದಳು. ಆ ನೆನಪಿನ ಪುಟಗಳನ್ನು ನನ್ನ ಮನದಲ್ಲೇ ಓದುತ್ತಿದ್ದರೆ, ಈಗಲೂ ನನ್ನ ಕಣ್ಣಾಲಿಗಳು ತುಂಬಿ ನಾನು ಟೈಪ್ ಮಾಡುತ್ತಿರುವ ಕೀ-ಬೋರ್ಡ್ ಕಾಣುತ್ತಲೇ ಇಲ್ಲ.
          ಅಂತೂ ನಮ್ಮ ಪದವಿ ಪರೀಕ್ಷೆಗಳು ಮುಗಿದು ನಾವೆಲ್ಲ ಪದವೀಧರರಾದೆವು. ನಾನು ಹಾಗು ಉಳಿದ ೩ ಜನ ಸ್ನೇಹಿತರು ಅದೇ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಗೆ ನೊಂದಾಯಿಸಿದೆವು. ಆದರೆ ಆ ನನ್ನ ಸ್ನೇಹಿತನಿಗೆ ಮೊದಲಿನಿಂದ ವಿದೇಶದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕೆಂಬ ಮಹದಾಸೆ ಇತ್ತು. ಅದರಂತೆಯೆ ಅವನ ಕಠಿಣ ಪ್ರಯತ್ನದ ಫಲವಾಗಿ ಅವನಿಗೆ ಒಂದು ವಿಶ್ವವಿದ್ಯಾಲಯದಲ್ಲಿ ವೇತನ ಸಹ ದೊರೆಯಿತು. ಅದರಂತೆಯೇ ಅವನು ವಿದೇಶಕ್ಕೆ ಪ್ರಯಾಣ ಬೆಳೆಸಿದ. ಅಲ್ಲಿಗೆ ಹೋದ ಕೆಲವೇ ತಿಂಗಳುಗಳಲ್ಲಿ, ತನ್ನ ಗೆಳತಿಯನ್ನು ಬಿಟ್ಟಿರಲಾರದ ಅವನು ಅವಳನ್ನು ಮದುವೆಯಾಗಲು ಅವರ ಮನೆಯವರೊಡನೆ ಪ್ರಸ್ತಾಪಿಸಿ ಮದುವೆಯೂ ಸಹ ನಡೆಯಿತು. ಅವರಿಬ್ಬರು ವಿದೇಶಕ್ಕೆ ಹೊರಡುವ ದಿನವೂ ಬಂದುಬಿಟ್ಟಿತು.
          ಅವಳು ತನ್ನ ಗಂಡನೊಡನೆ ವಿದೇಶಕ್ಕೆ ಹೊರಟುಹೋಗುವಳಲ್ಲ ಎಂದು ನನ್ನ ಮನ ಮೂಕವಾಗಿ ರೋಧಿಸುತ್ತಿತ್ತು. ಬಹುಶಃ ಈ ದೂರದ ದೇಶಕ್ಕೆ ಹೋಗುವ ಅಗಲಿಕೆಯನ್ನು ತಡೆದುಕೊಳ್ಳುವ ಶಕ್ತಿ ನನಗೆ ಕೊಡಲಿ ಎಂದೇ ದೇವರು ಕೆಲವು ವರ್ಷಗಳ ಹಿಂದೆ ಅವಳ ತಂದೆಗೆ ದೂರದೂರಿಗೆ ವರ್ಗಾವಣೆ ಮಾಡಿಸಿ ನನಗೆ ಅವಳಿಂದ ದೂರವಿರುವ ಶಕ್ತಿ ಕೊಟ್ಟಿದ್ದ ಆನಿಸುತ್ತೆ.
          ಒಂದೆಡೆ ನನ್ನ ಗೆಳೆಯನಿಗೆ ತಾನು ಇಷ್ಟಪಟ್ಟ ಗೆಳತಿ ಬಾಳಸಂಗಾತಿಯಾದಳಲ್ಲ ಅಂತ ಸಂತೋಷವಾದರೆ, ಇನ್ನೊಂದೆಡೆ "ಆ ದೇವರು ಕೊಟ್ಟ ತಂಗಿ ಹಾಗು ನನ್ನ ಆಪ್ತ ಸ್ನೇಹಿತ" ಇಬ್ಬರೂ ನನ್ನಿಂದ ದೂರ ಹೋಗುತ್ತಿದ್ದಾರಲ್ಲ ಎಂಬ ದುಖಃ. ಅವರಿಬ್ಬರೂ ಹೊರಡುವ ದಿನ ನಾನು ಪಟ್ಟ ವೇದನೆ ಅದನ್ನು ಅನುಭವಿಸಿದವರಿಗೆ ಗೊತ್ತು. ಅಗಲಿಕೆಯೆಂಬುದು ಎಂಥಹಾ ಕಠಿಣವಾದ ಶಿಕ್ಷೆ ಎಂದು ಅರಿವಾಯ್ತು. ಮನಸಾರೆ ಅವರಿಬ್ಬರಿಗು ಅಭಿನಂದಿಸಿ ನನ್ನ ದುಖಃ ದುಮ್ಮಾನಗಳನ್ನು ಬದಿಗೊತ್ತಿ ಆನಂದದಿಂದ ಅವರನ್ನು ಬೀಳ್ಕೊಟ್ಟೆ. ವಿಮಾನ ನಿಲ್ದಾಣದಲ್ಲಿ ಅವರಿಬ್ಬರು ಕಣ್ಣಿಂದ ಮರೆಯಾಗುವವರೆಗೂ ಕೈಬೀಸುತ್ತಾ ನಿಂತಿದ್ದೆ. ನಮ್ಮದು ತುಂಬಿದ ಮನೆ. ಎಲ್ಲಾ ಇದ್ದರು ಅವರಿಬ್ಬರನ್ನು ಕಳುಹಿಸಿ ನಮ್ಮ ಮನೆಗೆ ಬಂದಾಗ ಎಲ್ಲೆಲ್ಲೂ ಶೂನ್ಯ ಆವರಿಸಿರುವಂತೆ ಭಾಸವಾಗುತ್ತಿತ್ತು.
          ಅವರು ಅಲ್ಲಿಗೆ ಹೋದ ನಂತರ ಅಲ್ಲಿಂದ ಅವಳು ಬರೆದ ಮೊದಲ ಪತ್ರ ನನಗೆ!!! ತಿಂಗಳಿಗೊಮ್ಮೆ ನಮ್ಮಿಬ್ಬರ ನಡುವೆ ಪತ್ರಗಳ ವಿನಿಯೋಗವಾಗುತ್ತಿತ್ತು. ಅಲ್ಲಿನ ಅವರ ಜೀವನ, ಹೊಸ ದೇಶ, ಭಾಷೆ, ಸಂಸ್ಕೃತಿಗಳ ಬಗ್ಗೆ ವಿವರವಾಗಿ ಬರೆಯುತ್ತಿದ್ದಳು. ಈಗಲೂ ಕೆಲವೊಮ್ಮೆ ಅವಳ ಆ ಪತ್ರಗಳನ್ನು ಓದುತ್ತಿದ್ದರೆ ನನ್ನ ಮನಸ್ಸು ೨೦ ವರ್ಷಗಳ ಹಿಂದಿನ ಗತಕಾಲಕ್ಕೆ ಓಡಿ ಹೋಗಿರುತ್ತೆ. ನಾನು ಸ್ನಾತಕೋತ್ತರ ಪದವಿ ಮುಗಿಸಿ ಕೆಲಸ ಹುಡುಕುವ ನಿರುದ್ಯೋಗಿಯಾಗಿದ್ದಾಗ ಆ ನನ್ನ ತಂಗಿ ನನಗೆ ಅಲ್ಲಿಂದ ಹಣದ ಸಹಾಯ ಸಹಾ ಮಾಡಿದ್ದಳು!! ಅಂಚೆ ಮೂಲಕ ಪತ್ರ ರವಾನೆಯ ಯುಗ ಕಡಿಮೆಯಾಗಿ, ಆಧುನಿಕ ಮಾಹಿತಿ ತಂತ್ರಜ್ನ್ಯಾನದ ಕೊಡುಗೆಯಾಗಿ ಈ-ಸಂದೇಶಗಳ ಯುಗ ಆರಂಭವಾದಂತೆ ಗಣಕಯಂತ್ರ ನಮ್ಮಿಬ್ಬರ ನಡುವೆ ಬಾಂಧವ್ಯ ಬೆಸೆಯುವ ಕೊಂಡಿಯಾಯಿತು. ಆಗೊಮ್ಮೆ ಈಗೊಮ್ಮೆ ದೂರವಾಣಿಯಲ್ಲಿ ಆಕೆ ಕರೆ ಮಾಡಿದಾಗ ಗಂಟೆಗಟ್ಟಲೆ ಹರಟೆ ಹೊಡೆಯುತ್ತಿದ್ದೆವು,
          ನಮ್ಮ ಪರಿಚಯವಾಗಿ ಇಲ್ಲಿಗೆ ಸುಮಾರು ೨೦ ವರ್ಷಗಳೇ ಕಳೆದಿವೆ. ಅಂದಿನಿಂದ ನನಗೆ ತಂಗಿಯಿಲ್ಲವೆಂಬ ಕೊರತೆಯನ್ನು ಹೋಗಲಾಡಿಸಿ, ತನ್ನ ಹೃದಯದಲ್ಲಿ ಒಡಹುಟ್ಟಿದವರಿಗಿಂತ ಹೆಚ್ಚಿನ ಸ್ಥಾನವನ್ನು ಕೊಟ್ಟಿರುವ ಆ "ದೇವರು ಕೊಟ್ಟ ತಂಗಿ"ಗೆ ನಾನು ಸದಾ ಚಿರಋಣಿ! ಅನೇಕ ಜನ ವಿದೇಶಕ್ಕೆ ಹೋಗಿ ಒಂದೆರೆಡು ವರ್ಷಗಳಿದ್ದರೆ ತಮ್ಮತನವನ್ನೇ ಮರೆತು ಅವರ ನಡೆ-ನುಡಿಗಳನ್ನೆ ಬದಲಿಸಿಕೊಂಡು ಬಿಡ್ತಾರೆ. ಆದರೆ ೧೫ ವರ್ಷಗಳಿಂದ ಅಲ್ಲೇ ನೆಲೆಸಿದ್ದರು ಆಕೆಗೆ ನನ್ನ ಮೇಲಿರುವ ಪ್ರೀತಿ-ವಿಶ್ವಾಸ ಎಳ್ಳಷ್ಟೂ ಕಡಿಮೆಯಾಗಿಲ್ಲ. ಪ್ರತೀ ವರ್ಷ ನನ್ನ ಜನ್ಮ ದಿನ, ರಕ್ಷಾ ಬಂಧನ ದಿನ, ವಿವಾಹ ವಾರ್ಷಿಕೋತ್ಸವ ದಿನದಂದು ಮರೆಯದೆ ಕರೆ ಮಾಡಿ ನಮಗೆ ಶುಭ ಹಾರೈಸುವುದನ್ನು ಮರೆತಿಲ್ಲ!
          ಮೊನ್ನೆಯ ದಿನ ನಮ್ಮ ಮನೆಯಲ್ಲಿನ ಕಪಾಟಿನಲ್ಲಿದ್ದ ಹಳೆಯ ಪುಸ್ತಕಗಳು, ನೆನಪಿನ ಕಾಣಿಕೆಗಳು ಮೊದಲಾದವನ್ನು ಸ್ವಚ್ಚಗೊಳಿಸುತ್ತಿರುವಾಗ ಆಕೆ ಬರೆದ ಸುಮಾರು ೪೦-೫೦ ಪತ್ರಗಳು ಸಿಕ್ಕಿದವು. ಆ ಪತ್ರಗಳನ್ನೆಲ್ಲ ಓದುತ್ತಿದ್ದಾಗ ಈ ಲೇಖನವನ್ನು ಬರೆದು ನಿಮ್ಮೆಲ್ಲರೊಡನೆ ನನ್ನ ಜೀವನದ ಈ ಸವಿ ಅನುಭವವನ್ನು ಹಂಚಿಕೊಳ್ಳಬೇಕೆಂದು ನಿರ್ಧರಿಸಿ ಬರೆಯಲಾರಂಭಿಸಿದೆ.
ಅವಳನ್ನು ನೆನಪಿಸಿಕೊಂಡಾಗಲೆಲ್ಲ ನನ್ನ ಮನದಾಳದಲ್ಲಿ ಹೊರಹೊಮ್ಮುವುದು ಅಣ್ಣ - ತಂಗಿಯರ ನಡುವೆ ಬಾಂಧವ್ಯ ಬೆಸೆಯುವ ಈ ಸುಮಧುರ ಗೀತೆ.....
"ಸಾವಿರ ಜನುಮದಲೂ ನಮ್ಮ ಬಂಧ ಬೆಳೆದಿರಲಿ, ಆನಂದ ತುಂಬಿರಲಿ........."
-ಸತೀ
 
 

No comments:

Post a Comment