Thursday, October 28, 2010

"ದೇವರು ಕೊಟ್ಟ ತಂಗಿ"

"ದೇವರು ಕೊಟ್ಟ ತಂಗಿ"
ನಾನು ಬರೆಯಬೇಕೆಂದಿರುವ ಈ ಲೇಖನ ನನ್ನ ಜೀವನದಲ್ಲಿ ಬಹಳ ವರ್ಷಗಳ ಹಿಂದೆ ನಡೆದ ಒಂದು ಸುಮಧುರವಾದ ಘಟನೆ. ಅದನ್ನ ಈಗ ನಿಮ್ಮೆಲ್ಲರೊಡನೆ ಹಂಚಿಕೊಳ್ಳಬೇಕೆಂಬ ಮನಸ್ಸಾಗ್ತಾ ಇದೆ. ಹೇಗೆ ಆರಂಭಿಸಲಿ ಅಂತ ಗೊತ್ತಾಗ್ತಾ ಇಲ್ಲ. ಹೂ...ಹೀಗೆ.....
          ನಾವು ನಮ್ಮ ತಂದೆ-ತಾಯಿಗೆ ನಾಲ್ಕು ಜನ ಗಂಡು ಮಕ್ಕಳು. ಆದರೆ ಹೆಣ್ಣು ಮಕ್ಕಳಿಲ್ಲವೆಂಬ ಕೊರಗು ನಮ್ಮೆಲ್ಲರ ಮನಸ್ಸನ್ನು ಯಾವಾಗಲು ಕೊರೆಯುತ್ತಿತ್ತು. ನನಗೋ ಚಿಕ್ಕಂದಿನಿಂದ ಒಬ್ಬ ಪುಟ್ಟ ತಂಗಿ ಬೇಕೆಂದು  ಮನದಲ್ಲಿ ಸದಾ ಅನಿಸುತ್ತಿತ್ತು. ಹಾದಿಯಲ್ಲಿ ಹೋಗುವಾಗ, ಒಟ್ಟಾಗಿ ಆಡುವ ಪುಟ್ಟ ಅಣ್ಣ-ತಂಗಿಯರನ್ನು ನೋಡಿದಾಗ, ನನ್ನ ಗೆಳೆಯರ ಮನೆಗೆ ಹೋದಾಗ ಅವರು ತಮ್ಮ/ತಂಗಿಯರೊಡನೆ ಆಡುವ ಪ್ರೀತಿಯ ಜಗಳ ಕಂಡಾಗ, ರಕ್ಷಾಬಂಧನದಂದು ತಂಗಿ ಅಣ್ಣನ ಒಳಿತನ್ನು ಬಯಸಿ ರಾಖೀ ಕಟ್ಟುವಾಗ, ನಾಗರ ಪಂಚಮಿಯಂದು ಅಣ್ಣ-ತಂಗಿಯರು ಒಟ್ಟಾಗಿ ತನಿಯೆರೆಯುವಾಗ ನನ್ನ ಮನ ಮೂಕವೇದನೆ ಅನುಭವಿಸುತ್ತಿತ್ತು. ಯಾವಾಗಲು ನಾನು ದೇವರನ್ನು ಶಪಿಸುತ್ತಿದ್ದೆ, ಏಕೆ ನನಗೆ ಒಬ್ಬ ತಂಗಿಯನ್ನು ಕೊಡಲಿಲ್ಲ ಅಂತ.
          ನನ್ನ ಪದವಿ-ಪೂರ್ವ ವಿಧ್ಯಾಭ್ಯಾಸ ಮುಗಿಸಿ ಮುಂದೆ ಪದವೀಧರನಾಗುವ ಆಕಾಂಕ್ಷೆ ಹೊತ್ತು, ವಿಶ್ವ-ವಿದ್ಯಾಲಯದಲ್ಲಿ ಪ್ರವೇಶ ಪಡೆದೆ. ಶಾಲಾ-ಕಾಲೇಜಿನಲ್ಲಿ ಆಗದ ಅನುಭವಗಳು ವಿಶ್ವ-ವಿದ್ಯಾನಿಲಯದಲ್ಲಿ ಆಗಲಾರಂಭಿಸಿದವು. ನನ್ನ ಮೊದಲನೇ ವರ್ಷದ ಪದವಿ ಪರೀಕ್ಷೆ ಮುಗಿಸುವಷ್ಟರಲ್ಲಿ ಕೇವಲ ೪-೫ ಜನ ಆತ್ಮೀಯ ಗೆಳೆಯ/ಗೆಳತಿಯರ ಗುಂಪೊಂದು ಕಟ್ಟಿಕೊಡಿದ್ದೆ. ಅವರು ಇಂದಿಗೂ ನನ್ನ ಆಪ್ತ-ಸ್ನೇಹಿತರಾಗೆ ಇದ್ದಾರೆ. ಆ ನಾಲ್ಕು ಜನರಿಗು ಸೋದರಿ/ಸೋದರರಿದ್ದರು. ನಾನೊಬ್ಬ ಈ ವಿಷಯದಲ್ಲಿ ಗುಂಪಿಗೆ ಸೇರದ ವ್ಯಕ್ತಿಯಾಗಿದ್ದೆ.
ನನ್ನ ಎರಡನೇ ವರ್ಷದ ಪದವಿಯ ಮೊದಲ ದಿನಗಳಲ್ಲಿ ಒಂದು ದಿನ ಬೆಳಿಗ್ಗೆ (ಬಹುಶಃ 9/11/1989 ಅನ್ನಿಸುತ್ತೆ!!) ನಮ್ಮ ಗುಂಪಿನ ಒಬ್ಬ ಸ್ನೇಹಿತ ನನ್ನ ಹತ್ತಿರ ಬಂದು ಈ ಸಂಜೆ ಒಂದು ವಿಶೇಷ ಕಾದಿದೆ, ಸರಿಯಾಗಿ ೫.೩೦ಕ್ಕೆ ಒಂದು ಹೋಟೆಲಿನ ಹತ್ತಿರ ಬಾ ಅಂತ ಹೇಳಿದ. ನನಗೆ ಬೆಳಗಿನಿಂದಲೂ ಏನೋ ಆತುರ, ಕಾತರ. ಏನಿರಬಹುದು ಆ ವಿಶೇಷ ಅಂತ ತಲೆಯಲ್ಲಿ ನೂರೆಂಟು ಲೆಕ್ಕಾಚಾರ ಹಾಕಿದೆ. ಇಡೀ ದಿನ ತರಗತಿಗಳಲ್ಲಿ ಪಾಠ ಸಹ ಸರಿಯಾಗಿ ಕೇಳಲಾಗಲಿಲ್ಲ. ಅಂತೂ ಸಂಜೆ ೫.೩೦ ಆಗುವವರೆಗೂ ಹೇಗೋ ಆ ದಿನದೂಡಿ ಅವನು ಹೇಳಿದ್ದ ಹೋಟೆಲನ್ನು ತಲುಪಿದೆ.
          ಕೆಲವು ಕ್ಷಣಗಳ ಬಳಿಕ ನನ್ನ ಸ್ನೇಹಿತ ಒಂದು ಯುವತಿಯೊಡನೆ ನಾನು ಕುಳಿತಿದ್ದ ಟೇಬಲ್ ಬಳಿ ಬಂದು ಜೊತೆಯಲ್ಲಿದ್ದ ಯುವತಿಯನ್ನು ಪರಿಚಯಿಸಿ, ಈಕೆ ನನ್ನ "ಗೆಳತಿ" ಎಂದು ಹೇಳಿದ. ನಾನು ಆ ದಿನಗಳಲ್ಲಿ ಸ್ವಲ್ಪ ನಾಚಿಕೆ ಸ್ವಭಾವಿ ಹಾಗು ಮಿತಭಾಷಿಯಾಗಿದ್ದೆ. ಹೊಸಬರೊಡನೆ ಮಾತನಾಡಲು ಬಹಳ ಸಂಕೋಚವಾಗುತ್ತಿತ್ತು (ಈಗ ಹಾಗಿಲ್ಲ!!). ಆದರೂ ಅದೇನೋ, ಮೊದಲನೆ ನೋಟದಲ್ಲೆ ಆಕೆ ನನಗೆ ಬಹಳ ಪರಿಚಿತಳು ಅನ್ನಿಸುತ್ತಿತ್ತು. ಆತ್ಮೀಯತೆಯಿಂದ "ಹಲೋ" ಎಂದೆ. ಮೊದಲನೇ ಭೇಟಿಯಲ್ಲೆ ಆಕೆ ನನ್ನೊಡನೆ ಬಹಳ ಅಕ್ಕರೆಯಿಂದ ಮನಬಿಚ್ಚಿ ಮಾತನಾಡಿದಳು.
            ಹೀಗೆ ಯಾವಾಗಲಾದರೊಮ್ಮೆ ಆಗಾಗ್ಗೆ ನನ್ನ ಸ್ನೇಹಿತನೊಡನೆ ಅವಳ ಭೇಟಿ ಆಗುತ್ತಿತ್ತು. ಇಂತಹ ಕೆಲವು ಭೇಟಿಗಳಲ್ಲಿಯೇ ನಮ್ಮಲ್ಲಿ ಒಂದು ರೀತಿಯ ಅನುಬಂಧ ಬೆಳೆಯಲಾರಂಭಿಸಿತು. ಈ ನಡುವೆ, ನಾನು ಅವಳನ್ನು ನನ್ನ ತಂದೆ-ತಾಯಿ, ಅಣ್ಣ - ತಮ್ಮಂದಿರಿಗೆ ಪರಿಚಯಿಸಿದೆ. ಮೊದಲನೇ ಪರಿಚಯದಲ್ಲೆ ಅವಳು ನಮ್ಮ ತಂದೆ ತಾಯಿಯರನ್ನು "ಅಪ್ಪಾಜಿ - ಅಮ್ಮ" ಎಂದು ಕೂಗಿ ಕರೆದಾಗ ಅವರಿಗೂ ಬಹಳ ಆನಂದವಾಯಿತು. ಕೆಲ ಸಮಯದಲ್ಲಿಯೇ ಅವಳು ನಮ್ಮ ಮನೆಯ ಮಗಳಂತಾದಳು. ಮೆಲ್ಲನೆ ನನ್ನ ಮನದಲ್ಲಿ ತಂಗಿ ಇಲ್ಲವೆಂಬ ಭಾವನೆ ಓಡಿಹೋಗಿ, ಚಿಕ್ಕಂದಿನಿಂದಲೇ ನನಗೆ ಒಡಹುಟ್ಟಿದವಳಿದ್ದಾಳೆ ಎಂಬ ಭಾವನೆ ಬೆಳೆಯಲಾರಂಭಿಸಿತು. ಆ ನನ್ನ ತಂಗಿ ದಿನಾಂಕಗಳನ್ನು ನೆನಪಿತ್ತುಕೊಳ್ಳುವುದರಲ್ಲಿ ಅತೀ ನಿಪುಣೆಯಾಗಿದ್ದಳು. ನಮಗೆ ಪರೀಕ್ಷೆಗಳಿರುವ ದಿನ, ಜನ್ಮದಿನ, ರಾಖಿ ಹಬ್ಬದ ದಿನ ಮರೆಯದೆ ಶುಭಾಶಯ ಪತ್ರಗಳನ್ನು ಕಳಿಸುತ್ತಿದ್ದಳು. ಆ ವರ್ಷದ "ರಕ್ಷಾ ಬಂಧನ" ದಿನದಂದು ನನ್ನ ಕೈಗೆ ರಾಖೀ ಕಟ್ಟಿ ನಮ್ಮಿಬ್ಬರ ಅಣ್ಣ-ತಂಗಿಯರ ಸಂಬಂಧವನ್ನು ಇನ್ನೂ ಗಟ್ಟಿಗೊಳಿಸಿದ್ದಳು.
ಸುಖ-ದುಖಃಗಳು ಬಾಳಿನ ಎರಡು ಮುಖಗಳಿದ್ದಂತೆ. ಆಗಾಗ್ಗೆ ಕೆಲವು ದುಖಃಕರ ವಿಷಯಗಳು ಜೀವನದಲ್ಲಿ ನಮ್ಮ ಮನಸ್ಸನ್ನು ಗಟ್ಟಿಗೊಳಿಸುತ್ತವೆ. ತಂಗಿ ಸಿಕ್ಕಳು ಎಂದು ಸಂತೋಷಪಡುತ್ತಿದ್ದ ಕೆಲವೇ ತಿಂಗಳುಗಳಲ್ಲಿ ಒಂದು ದಿನ ನನ್ನ ಸ್ನೇಹಿತನ ಬಾಡಿದ ಮುಖ ಕಂಡು ನನಗೆ ಬಹಳ ಆತಂಕವಾಯಿತು.  ಅವನು ಹೇಳಿದ ಆ ವಿಷಯ ನನ್ನ ಮುಖವನ್ನು ಇನ್ನೂ ಕಳೆಗುಂದುವಂತೆ ಮಾಡಿತು. ನನ್ನ ಆ ತಂಗಿಯ ತಂದೆ ಸರ್ಕಾರಿ ಇಂಜೀನಿಯರ್. ಅವರಿಗೆ ಬಹಳ ವರ್ಷಗಳ ನಂತರ ದೂರದ ಊರಿಗೆ ವರ್ಗಾವಣೆಯಾಗಿತ್ತು. ಅವರು ಅದನ್ನು ತಪ್ಪಿಸಿಕೊಳ್ಳಲಾಗದೆ ತಮ್ಮ ಸಂಸಾರ ಸಮೇತ ಆ ಊರಿಗೆ ಹೋಗಲು ನಿರ್ಧರಿಸಿದ್ದರು. ನನ್ನ ಹಾಗು ನನ್ನ ಸ್ನೇಹಿತನ ಮನಸ್ಥಿತಿ ಒಂದೇ ಆಗಿತ್ತು. ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ "ಗೆಳತಿ"ಯಿಂದ ದೂರ ಇರಬೇಕಲ್ಲ ಅಂತ ಅವನ ವ್ಯಥೆಯಾದರೆ, ಕೇವಲ ಒಂದೇ ವರ್ಷದಲ್ಲಿ ತನ್ನ ಒಡಹುಟ್ಟಿದವರಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುವ ಆ "ತಂಗಿ" ಯಿಂದ ದೂರವಿರಬೇಕಲ್ಲ ಎಂಬುದು ನನ್ನ ವ್ಯಥೆ. ಆದರೂ ಬಂದದ್ದೆಲ್ಲ ಅನುಭವಿಸದೆ ಬೇರೆ ದಾರಿ ಇಲ್ಲವಲ್ಲ ಅಂತ ಒಲ್ಲದ ಮನಸ್ಸಿನಿಂದ ಅವಳಿಗೆ ವಿದಾಯ ಹೇಳಿ ಕಳುಹಿಸಿದೆವು.
          ಇಂಗ್ಲೀಷ್ನಲ್ಲಿ ಒಂದು ಹೇಳಿಕೆಯಿದೆ "Out of sight is Out of mind" ಅಂತ. ಆದರೆ ಇಲ್ಲಿ ಹಾಗಾಗಲಿಲ್ಲ. ಆಕೆ "ಕಂಗಳಿಂದ ದೂರ ಹೋದಷ್ಟು" ನಮ್ಮ ನಡುವಿನ ಪ್ರೀತಿ ಹೆಚ್ಚಾಯ್ತು. ಅವಳಿಂದ ನಿರಂತರವಾಗಿ ಪತ್ರಗಳು ಬರಲಾರಂಭಿಸಿದವು. ಆ ಕಾಲಕ್ಕೆ ದೂರವಾಣಿ ಬಹಳ ದುಬಾರಿಯಾದ್ದರಿಂದ ಅವಳ ಪತ್ರಕ್ಕಾಗಿ ವಾರಕ್ಕೊಮ್ಮೆ ಅಂಚೆಯವನ ದಾರಿ ಕಾಯುವುದು ನನ್ನ ನಿರಂತರ ಅಭ್ಯಾಸವಾಯಿತು. ರಾಖಿ ಹಬ್ಬದ ದಿನ ಮರೆಯದೇ ಆ ಊರಿನಿಂದ ನಮ್ಮ ಮನೆಗೆ ಬಂದು ನನಗೆ "ರಕ್ಷಾಬಂಧನ" ಕಟ್ಟಿ ಹರಸಿ ಹೋಗುತ್ತಿದ್ದಳು. ಆ ನೆನಪಿನ ಪುಟಗಳನ್ನು ನನ್ನ ಮನದಲ್ಲೇ ಓದುತ್ತಿದ್ದರೆ, ಈಗಲೂ ನನ್ನ ಕಣ್ಣಾಲಿಗಳು ತುಂಬಿ ನಾನು ಟೈಪ್ ಮಾಡುತ್ತಿರುವ ಕೀ-ಬೋರ್ಡ್ ಕಾಣುತ್ತಲೇ ಇಲ್ಲ.
          ಅಂತೂ ನಮ್ಮ ಪದವಿ ಪರೀಕ್ಷೆಗಳು ಮುಗಿದು ನಾವೆಲ್ಲ ಪದವೀಧರರಾದೆವು. ನಾನು ಹಾಗು ಉಳಿದ ೩ ಜನ ಸ್ನೇಹಿತರು ಅದೇ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಗೆ ನೊಂದಾಯಿಸಿದೆವು. ಆದರೆ ಆ ನನ್ನ ಸ್ನೇಹಿತನಿಗೆ ಮೊದಲಿನಿಂದ ವಿದೇಶದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕೆಂಬ ಮಹದಾಸೆ ಇತ್ತು. ಅದರಂತೆಯೆ ಅವನ ಕಠಿಣ ಪ್ರಯತ್ನದ ಫಲವಾಗಿ ಅವನಿಗೆ ಒಂದು ವಿಶ್ವವಿದ್ಯಾಲಯದಲ್ಲಿ ವೇತನ ಸಹ ದೊರೆಯಿತು. ಅದರಂತೆಯೇ ಅವನು ವಿದೇಶಕ್ಕೆ ಪ್ರಯಾಣ ಬೆಳೆಸಿದ. ಅಲ್ಲಿಗೆ ಹೋದ ಕೆಲವೇ ತಿಂಗಳುಗಳಲ್ಲಿ, ತನ್ನ ಗೆಳತಿಯನ್ನು ಬಿಟ್ಟಿರಲಾರದ ಅವನು ಅವಳನ್ನು ಮದುವೆಯಾಗಲು ಅವರ ಮನೆಯವರೊಡನೆ ಪ್ರಸ್ತಾಪಿಸಿ ಮದುವೆಯೂ ಸಹ ನಡೆಯಿತು. ಅವರಿಬ್ಬರು ವಿದೇಶಕ್ಕೆ ಹೊರಡುವ ದಿನವೂ ಬಂದುಬಿಟ್ಟಿತು.
          ಅವಳು ತನ್ನ ಗಂಡನೊಡನೆ ವಿದೇಶಕ್ಕೆ ಹೊರಟುಹೋಗುವಳಲ್ಲ ಎಂದು ನನ್ನ ಮನ ಮೂಕವಾಗಿ ರೋಧಿಸುತ್ತಿತ್ತು. ಬಹುಶಃ ಈ ದೂರದ ದೇಶಕ್ಕೆ ಹೋಗುವ ಅಗಲಿಕೆಯನ್ನು ತಡೆದುಕೊಳ್ಳುವ ಶಕ್ತಿ ನನಗೆ ಕೊಡಲಿ ಎಂದೇ ದೇವರು ಕೆಲವು ವರ್ಷಗಳ ಹಿಂದೆ ಅವಳ ತಂದೆಗೆ ದೂರದೂರಿಗೆ ವರ್ಗಾವಣೆ ಮಾಡಿಸಿ ನನಗೆ ಅವಳಿಂದ ದೂರವಿರುವ ಶಕ್ತಿ ಕೊಟ್ಟಿದ್ದ ಆನಿಸುತ್ತೆ.
          ಒಂದೆಡೆ ನನ್ನ ಗೆಳೆಯನಿಗೆ ತಾನು ಇಷ್ಟಪಟ್ಟ ಗೆಳತಿ ಬಾಳಸಂಗಾತಿಯಾದಳಲ್ಲ ಅಂತ ಸಂತೋಷವಾದರೆ, ಇನ್ನೊಂದೆಡೆ "ಆ ದೇವರು ಕೊಟ್ಟ ತಂಗಿ ಹಾಗು ನನ್ನ ಆಪ್ತ ಸ್ನೇಹಿತ" ಇಬ್ಬರೂ ನನ್ನಿಂದ ದೂರ ಹೋಗುತ್ತಿದ್ದಾರಲ್ಲ ಎಂಬ ದುಖಃ. ಅವರಿಬ್ಬರೂ ಹೊರಡುವ ದಿನ ನಾನು ಪಟ್ಟ ವೇದನೆ ಅದನ್ನು ಅನುಭವಿಸಿದವರಿಗೆ ಗೊತ್ತು. ಅಗಲಿಕೆಯೆಂಬುದು ಎಂಥಹಾ ಕಠಿಣವಾದ ಶಿಕ್ಷೆ ಎಂದು ಅರಿವಾಯ್ತು. ಮನಸಾರೆ ಅವರಿಬ್ಬರಿಗು ಅಭಿನಂದಿಸಿ ನನ್ನ ದುಖಃ ದುಮ್ಮಾನಗಳನ್ನು ಬದಿಗೊತ್ತಿ ಆನಂದದಿಂದ ಅವರನ್ನು ಬೀಳ್ಕೊಟ್ಟೆ. ವಿಮಾನ ನಿಲ್ದಾಣದಲ್ಲಿ ಅವರಿಬ್ಬರು ಕಣ್ಣಿಂದ ಮರೆಯಾಗುವವರೆಗೂ ಕೈಬೀಸುತ್ತಾ ನಿಂತಿದ್ದೆ. ನಮ್ಮದು ತುಂಬಿದ ಮನೆ. ಎಲ್ಲಾ ಇದ್ದರು ಅವರಿಬ್ಬರನ್ನು ಕಳುಹಿಸಿ ನಮ್ಮ ಮನೆಗೆ ಬಂದಾಗ ಎಲ್ಲೆಲ್ಲೂ ಶೂನ್ಯ ಆವರಿಸಿರುವಂತೆ ಭಾಸವಾಗುತ್ತಿತ್ತು.
          ಅವರು ಅಲ್ಲಿಗೆ ಹೋದ ನಂತರ ಅಲ್ಲಿಂದ ಅವಳು ಬರೆದ ಮೊದಲ ಪತ್ರ ನನಗೆ!!! ತಿಂಗಳಿಗೊಮ್ಮೆ ನಮ್ಮಿಬ್ಬರ ನಡುವೆ ಪತ್ರಗಳ ವಿನಿಯೋಗವಾಗುತ್ತಿತ್ತು. ಅಲ್ಲಿನ ಅವರ ಜೀವನ, ಹೊಸ ದೇಶ, ಭಾಷೆ, ಸಂಸ್ಕೃತಿಗಳ ಬಗ್ಗೆ ವಿವರವಾಗಿ ಬರೆಯುತ್ತಿದ್ದಳು. ಈಗಲೂ ಕೆಲವೊಮ್ಮೆ ಅವಳ ಆ ಪತ್ರಗಳನ್ನು ಓದುತ್ತಿದ್ದರೆ ನನ್ನ ಮನಸ್ಸು ೨೦ ವರ್ಷಗಳ ಹಿಂದಿನ ಗತಕಾಲಕ್ಕೆ ಓಡಿ ಹೋಗಿರುತ್ತೆ. ನಾನು ಸ್ನಾತಕೋತ್ತರ ಪದವಿ ಮುಗಿಸಿ ಕೆಲಸ ಹುಡುಕುವ ನಿರುದ್ಯೋಗಿಯಾಗಿದ್ದಾಗ ಆ ನನ್ನ ತಂಗಿ ನನಗೆ ಅಲ್ಲಿಂದ ಹಣದ ಸಹಾಯ ಸಹಾ ಮಾಡಿದ್ದಳು!! ಅಂಚೆ ಮೂಲಕ ಪತ್ರ ರವಾನೆಯ ಯುಗ ಕಡಿಮೆಯಾಗಿ, ಆಧುನಿಕ ಮಾಹಿತಿ ತಂತ್ರಜ್ನ್ಯಾನದ ಕೊಡುಗೆಯಾಗಿ ಈ-ಸಂದೇಶಗಳ ಯುಗ ಆರಂಭವಾದಂತೆ ಗಣಕಯಂತ್ರ ನಮ್ಮಿಬ್ಬರ ನಡುವೆ ಬಾಂಧವ್ಯ ಬೆಸೆಯುವ ಕೊಂಡಿಯಾಯಿತು. ಆಗೊಮ್ಮೆ ಈಗೊಮ್ಮೆ ದೂರವಾಣಿಯಲ್ಲಿ ಆಕೆ ಕರೆ ಮಾಡಿದಾಗ ಗಂಟೆಗಟ್ಟಲೆ ಹರಟೆ ಹೊಡೆಯುತ್ತಿದ್ದೆವು,
          ನಮ್ಮ ಪರಿಚಯವಾಗಿ ಇಲ್ಲಿಗೆ ಸುಮಾರು ೨೦ ವರ್ಷಗಳೇ ಕಳೆದಿವೆ. ಅಂದಿನಿಂದ ನನಗೆ ತಂಗಿಯಿಲ್ಲವೆಂಬ ಕೊರತೆಯನ್ನು ಹೋಗಲಾಡಿಸಿ, ತನ್ನ ಹೃದಯದಲ್ಲಿ ಒಡಹುಟ್ಟಿದವರಿಗಿಂತ ಹೆಚ್ಚಿನ ಸ್ಥಾನವನ್ನು ಕೊಟ್ಟಿರುವ ಆ "ದೇವರು ಕೊಟ್ಟ ತಂಗಿ"ಗೆ ನಾನು ಸದಾ ಚಿರಋಣಿ! ಅನೇಕ ಜನ ವಿದೇಶಕ್ಕೆ ಹೋಗಿ ಒಂದೆರೆಡು ವರ್ಷಗಳಿದ್ದರೆ ತಮ್ಮತನವನ್ನೇ ಮರೆತು ಅವರ ನಡೆ-ನುಡಿಗಳನ್ನೆ ಬದಲಿಸಿಕೊಂಡು ಬಿಡ್ತಾರೆ. ಆದರೆ ೧೫ ವರ್ಷಗಳಿಂದ ಅಲ್ಲೇ ನೆಲೆಸಿದ್ದರು ಆಕೆಗೆ ನನ್ನ ಮೇಲಿರುವ ಪ್ರೀತಿ-ವಿಶ್ವಾಸ ಎಳ್ಳಷ್ಟೂ ಕಡಿಮೆಯಾಗಿಲ್ಲ. ಪ್ರತೀ ವರ್ಷ ನನ್ನ ಜನ್ಮ ದಿನ, ರಕ್ಷಾ ಬಂಧನ ದಿನ, ವಿವಾಹ ವಾರ್ಷಿಕೋತ್ಸವ ದಿನದಂದು ಮರೆಯದೆ ಕರೆ ಮಾಡಿ ನಮಗೆ ಶುಭ ಹಾರೈಸುವುದನ್ನು ಮರೆತಿಲ್ಲ!
          ಮೊನ್ನೆಯ ದಿನ ನಮ್ಮ ಮನೆಯಲ್ಲಿನ ಕಪಾಟಿನಲ್ಲಿದ್ದ ಹಳೆಯ ಪುಸ್ತಕಗಳು, ನೆನಪಿನ ಕಾಣಿಕೆಗಳು ಮೊದಲಾದವನ್ನು ಸ್ವಚ್ಚಗೊಳಿಸುತ್ತಿರುವಾಗ ಆಕೆ ಬರೆದ ಸುಮಾರು ೪೦-೫೦ ಪತ್ರಗಳು ಸಿಕ್ಕಿದವು. ಆ ಪತ್ರಗಳನ್ನೆಲ್ಲ ಓದುತ್ತಿದ್ದಾಗ ಈ ಲೇಖನವನ್ನು ಬರೆದು ನಿಮ್ಮೆಲ್ಲರೊಡನೆ ನನ್ನ ಜೀವನದ ಈ ಸವಿ ಅನುಭವವನ್ನು ಹಂಚಿಕೊಳ್ಳಬೇಕೆಂದು ನಿರ್ಧರಿಸಿ ಬರೆಯಲಾರಂಭಿಸಿದೆ.
ಅವಳನ್ನು ನೆನಪಿಸಿಕೊಂಡಾಗಲೆಲ್ಲ ನನ್ನ ಮನದಾಳದಲ್ಲಿ ಹೊರಹೊಮ್ಮುವುದು ಅಣ್ಣ - ತಂಗಿಯರ ನಡುವೆ ಬಾಂಧವ್ಯ ಬೆಸೆಯುವ ಈ ಸುಮಧುರ ಗೀತೆ.....
"ಸಾವಿರ ಜನುಮದಲೂ ನಮ್ಮ ಬಂಧ ಬೆಳೆದಿರಲಿ, ಆನಂದ ತುಂಬಿರಲಿ........."
-ಸತೀ
 
 

ಗೋರ್ಕಲ್ಲಿಗೆ ಗುಡಿ ಮಂದಿರ ನೂರು!

 ಗೋರ್ಕಲ್ಲಿಗೆ ಗುಡಿ ಮಂದಿರ ನೂರು!

ದಿನಬೆಳಗಾಗುವುದರಲಿ ತಲೆಯೆತ್ತಿ ನಿಲ್ಲುತ್ತಿವೆ ರಸ್ತೆಗೊಂದು ದೇವಮಂದಿರ
ಅದರ ಒಳ ಹೊರಗಿನ ದೃಶ್ಯಾವಳಿಗಳಲಿರುವ ಅಂತರ ಅಜಗಜಾಂತರ!!!
ಬೆಂಕಿ-ಬಿರುಗಾಳಿಗೂ ಜಗ್ಗದ ದೇವಮೂರ್ತಿಯ ವಾಸ ಹತ್ತಾರು ಅಂತಸ್ತಿನ ಗೋಪುರದೊಳಗೆ,
ಆ ಗುಡಿಕಟ್ಟಿದ ನೂರಾರು ಮಂದಿ ನಿಲಲು ನೆಲೆಯಿಲ್ಲದಿರುವರು ಪಾಳು ಮಂಟಪದ ಕೆಳಗೆ||
ಗುಡಿಯೊಳಗೆ ಮಂಗಳಾರತಿ ತಟ್ಟೆಗೆ ನೂರು,ಸಾವಿರ ರೂಪಾಯಿಗಳ ದಕ್ಷಿಣೆ,
ಗುಡಿಯೊರಗೆ ಕುಳಿತು ಭಿಕ್ಷೆ ಎನುವವರಿಗೆ ಚಿಲ್ಲರೆ ಹಾಕಲೂ ನಿರಾಕರಣೆ||
ತಿನಲಾಗದವನಿಗೆ ಹಾಲು,ಜೇನು,ಮೊಸರು, ತುಪ್ಪ ಸಕ್ಕರೆಯ ನೈವೇದ್ಯ,
ಹಸಿದ ಬಡಬಗ್ಗರಿಗೆ ಎರಡು ಹೊತ್ತು ತಿನಲು ಅನ್ನವಿಲ್ಲದಷ್ಟೂ ದಾರಿದ್ರ್ಯ||
ದೇವಿಯ ಮೂರ್ತಿಗೆ ಹೊದೆಸುವರು ಜರತಾರಿ ಸೀರೆ ಕುಪ್ಪಸಗಳನು ಶ್ರೀಮಂತ ಸ್ತ್ರೀಯರು
ಪೂರ್ತಿ ಮಾನ ಮುಚ್ಚಲಾರದೆ ಹರಕು ಸೀರೆ ಕುಪ್ಪಸದಲಿ ಕುಳಿತಿರುವರು ಬಡ ಮಹಿಳೆಯರು||
ಗುಡಿಯೊಳಗೆ ಬೆಚ್ಚಗೆ ಕುಳಿತಿರುವ ಓ ದೇವರೆ
ಕೇಳಿಸದೆ ನಿನಗೆ ದೀನ ದುರ್ಬಲರ ಹಸಿವಿನ ಕರೆ
ಬಂದು ನೆಲೆಸಿ ನಿನ್ನ ಅಂಧ ಭಕ್ತರ ಹೃದಯದೊಳಗೆ
ಜಾಗೃತಗೊಳಿಸಬಾರದೆ ದಾನ ಧರ್ಮ ಮಾಡುವ ಬಗೆ!!!!!
-ಸತೀ

Saturday, October 23, 2010

ಭ್ರಷ್ಟಾಚಾರದ ಸುಳಿಯಲ್ಲಿ!!

ಭ್ರಷ್ಟಾಚಾರದ ಸುಳಿಯಲ್ಲಿ!!
ಸುಮಾರು ೧೫ ವರ್ಷಗಳ ಹಿಂದೆ ನಾನು ಸರ್ಕಾರದ ಕೃಷಿಗೆ ಸಂಬಂಧಿಸಿದ ಇಲಾಖೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಯಾಗಿದ್ದಾಗ ನಡೆದ ಘಟನೆಯಿದು. ಬಡರೈತರ ಆದಾಯ ಹೆಚ್ಚಿಸಲು, ಅವರ ಹಳೆಯ ತೋಟಗಳ ಪುನಶ್ಚೇತನಕ್ಕಾಗಿ ಒಂದು ಯೋಜನೆಯನ್ನು ಆರಂಭಿಸಲಾಗಿತ್ತು. ಆರ್ಥಿಕವಾಗಿ ಹಿಂದುಳಿದ ಸಣ್ಣ-ಪುಟ್ಟ ರೈತರು ತಮ್ಮ ತೋಟಗಳಲಿದ್ದ ಹಳೆಯ, ಇಳುವರಿ ಕಡಿಮೆಯಾದ ಮರಗಳನ್ನು ತೆಗೆಸಿ ಆಧುನಿಕ ಹೊಸ ತಳಿಗಳ ಹಣ್ಣಿನ ಮರಗಳನ್ನು ಇಲಾಖೆಯಿಂದ ಉಚಿತವಾಗಿ ಪಡೆದು ನೆಡಬಹುದಾಗಿತ್ತು. ಗ್ರಾಮಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲೇ ಅವರಿಗೆ ಬೇಕಾದ ಫಲಾನುಭವಿಗಳ ಪಟ್ಟಿಯೂ ಸಿದ್ದವಾಗುತ್ತಿತ್ತು ಹಾಗು ಅವರ ಆದೇಶದ ಮೇರೆಗೆ ಎಲ್ಲವನ್ನೂ ವಿತರಿಸಲಾಗುತ್ತಿತ್ತು. ಅಂತೂ ಇಂತೂ ನಾನು ಸ್ವಲ್ಪ ಶ್ರಮವಹಿಸಿ ಆರ್ಥಿಕವಾಗಿ ಹಿಂದುಳಿದ ಕೆಲವು ರೈತರ ಹೆಸರನ್ನೂ ಆ ಪಟ್ಟಿಯಲ್ಲಿ ಸೇರಿಸುವಂತೆ ಮಾಡಿದ್ದೆ.
 
ಒಂದು ದಿನ ಒಬ್ಬ ವಯಸ್ಸಾದ ಬಡವೃದ್ದರೊಬ್ಬರು ನನ್ನ ಕಚೇರಿಗೆ ಬಂದು ತಮ್ಮ ಗುರುತಿನ ಚೀಟಿಯನ್ನು ತೋರಿಸಿ ನಾನು ಒಬ್ಬ ಫಲಾನುಭವಿ ನನಗೂ ಗಿಡ ಕೊಡಿಸಿ ಎಂದರು. ಆಗ ಸಿದ್ದಪಡಿಸಿದ್ದ ಪಟ್ಟಿಯಲ್ಲಿ ಅವರ ಹೆಸರಿರುವುದನ್ನು ಖಚಿತ ಪಡಿಸಿಕೊಂಡು ನನ್ನ ಸಹಾಯಕರ ಸಹಾಯದಿಂದ ೩೦ ಹಣ್ಣಿನ ಗಿಡಗಳನ್ನು ಅವರು ಬಾಡಿಗೆಗೆ ತಂದಿದ್ದ ಗಾಡಿಯಲ್ಲಿ ತುಂಬಿಸಿದೆವು.
ನಂತರ ಆ ವೃದ್ದರು ನನ್ನ ಕಚೇರಿಗೆ ಬಂದು ತಮ್ಮ ಹರಿದ ಅಂಗಿಯ ಕಿಸೆಯಿಂದ ಮಡಿಚಿ ಮಾಸಲಾಗಿದ್ದ ನೂರು ರೂಪಾಯಿಯ ನೋಟೋಂದನ್ನು ನನ್ನ ಕೈಗೆ ನೀಡಲು ಬಂದರು. ನನಗೆ ಆಶ್ಚರ್ಯವಾಗಿ ಏನಿದು ಎಂದು ಕೇಳಿದೆ. ಆಗ ಅವರು, ಏನಿಲ್ಲ ಸಾಹೆಬ್ರೆ, ಹಿಂದಿನ ಅಧಿಕಾರಿಗಳಿಗೆ ಈ ರೀತಿ ಗಿಡಗಳನ್ನು ತೆಗೆದುಕೊಂಡು ಹೋಗುವಾಗ ಕಡ್ಡಾಯವಾಗಿ ಅವರು ಕೇಳಿದಷ್ಟು ಹಣ ಕೊಡಬೇಕಿತ್ತು, ಈಗ ನನ್ನ ಬಳಿಯಿರುವುದು ಇಷ್ಟೇ, ನಾನು ತಂದಿರುವ ಗಾಡಿ ಬಾಡಿಗೆಗೆ ಸಹ ಈಗ ನಾನು ಯಾರಿಂದಲಾದ್ರೂ ಸಾಲ ಮಾಡಿ ಕೊಡಬೇಕು ಎಂದರು. ಒಂದು ಕಡೆ ನಮ್ಮ ವ್ಯವಸ್ಥೆಯ ಬಗ್ಗೆ ಕೋಪ, ಇನ್ನೊದೆಂಡೆ ಬಡತನದ ಬೇಗೆಯಿಂದ ಬಸವಳಿದ ಆ ವಯೋವೃದ್ದರ ಮೇಲೆ ಕನಿಕರ! ನನಗೆ ಬಹಳ ಬೇಸರವಾಗಿ ನನ್ನ ಕಿಸೆಯಿಂದ ನೂರರ ನೋಟೊಂದನ್ನು ಅವರ ಕೈಗೆ ತುರುಕಿ ಹೋಗಿ ಬನ್ನಿ ಎಂದು ಕೈಮುಗಿದು ಕಳುಹಿಸಿದೆ.
ನಾನು ನಿರ್ವಹಿಸುತ್ತಿದ್ದ ಆ ಕೆಲಸ ತಾಲ್ಲೂಕು ಮಟ್ಟದ ಗೆಜೆಟೆಡ್ ದರ್ಜೆಯದಾದರೂ ಅದರಲ್ಲಿದ್ದ, ರಾಜಕೀಯ ನೇತಾರ ಕೈವಾಡ, ಮೋಸ, ಲಂಚತನ ಎಲ್ಲ ನೋಡಿ ಬೇಸರದಿಂದ ಆ ಕೆಲಸಕ್ಕೆ ರಾಜಿನಾಮೆಯನಿತ್ತು ಬಂದಿದ್ದೆ. ನಂತರ ನನ್ನ ಮನಸ್ಸಿಗೆ ತೃಪ್ತಿತರುವ ಸಂಶೋಧನ ಕ್ಷೇತ್ರ ಸೇರಲು ಬೇಕಾದ ಪರೀಕ್ಷೆ ಕಟ್ಟಿ ಅದರಲ್ಲಿ ಪಾಸಾದೆ. ನಾನು ಆಯ್ಕೆಗೊಂಡ ಸಂಸ್ಥೆಯಿಂದ ಕೆಲಸದ ಕರೆಯೋಲೆ ಸಹ ಬಂತು. ಜೊತೆಗೆ medical ಮತ್ತು police verification report ಸಹ ಕಳುಹಿಸಿ ಎಂದು ತಿಳಿಸಿದ್ದರು.
ಬೌರಿಂಗ್ ಆಸ್ಪತ್ರೆಗೆ ಹೋಗಿ,ಅಲ್ಲಿನ ವೈದ್ಯಾಧಿಕಾರಿಗಳು ನಿಗದಿಪಡಿಸಿದ "ರಸೀತಿಯಿಲ್ಲದ ಫೀಸನ್ನು" ಕಟ್ಟಿದ ನಂತರ, ನನ್ನ ದೇಹದ ಎಲ್ಲ ಅಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಏನನ್ನೂ ಪರೀಕ್ಷಿಸದೆಯೇ ರಿಪೋರ್ಟ್ ಕೊಟ್ಟು ಕಳುಹಿಸಿದ್ದರು!!!.
ನಂತರ police verification ಗಾಗಿ ಒಬ್ಬ ಪೋಲಿಸ್ ನಮ್ಮ ಮನೆಯ ಹತ್ತಿರ ಬಂದು ಬೇಕಾದ ಪ್ರಶ್ನೆಗಳನ್ನು ಕೇಳಿ ಅಲ್ಲೂ "ರಸೀತಿ ಇಲ್ಲದೆಯೆ ಪಡೆಯುವ ಫೀಸು" ತೆಗೆದುಕೊಂಡು ಇನ್ನೊಂದು ವಾರದಲ್ಲಿ ನಿಮ್ಮ ರಿಪೋರ್ಟ್ ಕಳುಹಿಸುತ್ತೇವೆ ಎಂದು ಹೇಳಿ ಹೋದ.
ತಿಂಗಳಾಯಿತು, ೨ ತಿಂಗಳಾಯಿತು ಆ ರಿಪೋರ್ಟ್ ಪತ್ತೆಯೆ ಇಲ್ಲ!!!.
ನಾನು ಆಯ್ಕೆಗೊಂಡ ಸಂಸ್ಥೆಯಿಂದ reminder ಸಹ ಬಂತು ಬೇಗ ಅದನ್ನ ಕಳುಹಿಸಿ ಅಂತ. ಆಗ ನಾನು ನಮ್ಮ ಬಡಾವಣೆಯ ಪೋಲಿಸ್ ಠಾಣೆಗೆ ಭೇಟಿಯಿತ್ತು ಅಲ್ಲಿಂದ ಸಂಬಂಧಿಸಿದ ಫೈಲ್ ಸಂಖ್ಯೆ ಪಡೆದು ಕಮಿಷನರ್ ಕಚೇರಿಗೆ ಹೋದೆ. ಎಲ್ಲಾ ಹಂತದಲ್ಲೂ ತಾಂಡವವಾಡುತ್ತಿದ್ದ ಲಂಚತನ, ಮೋಸ, ರಾಜಕೀಯ ಎಲ್ಲ ಅನುಭವಿಸಿ ಅಂತೂ ಇಂತೂ ನನ್ನ ಕಡತ ಇರುವ ಮೇಜನ್ನು ತಲುಪಿದೆ.
ಸಂಬಂಧಪಟ್ಟ ಅಧಿಕಾರಿಗೆ ನನ್ನ ಕಡತದ ಸಂಖ್ಯೆ ನೀಡಿ ಅದರ ಬಗ್ಗೆ ವಿಚಾರಿಸಿದಾಗ ಅವನ ಮುಖದ ಮೇಲೆ ಹುಸಿನಗು!!!. ಲೀಲಾಜಾಲವಾಗಿ ತನ್ನ ಮೇಜಿನ ಡ್ರಾಯರ್ ತೆರೆದು ಅದರಲ್ಲಿದ್ದ ನನ್ನ ಕಡತ ತೋರಿಸಿ ಹೇಳಿದ, ಇದರ ರಿಪೋರ್ಟ್ ಸಿದ್ದವಾಗಿ ೨ ತಿಂಗಳಾಯಿತು, ನೀವು ಬಂದು ನನ್ನನ್ನು ವಿಚಾರಿಸಿಕೊಳ್ಳಲೇ ಇಲ್ಲ, ಅದಕ್ಕೆ ನಿಮಗೆ ಅದನ್ನು ಕಳುಹಿಸಲಿಲ್ಲ ಎಂದು ಅಣುಕು ನಗೆ ಬೀರಿದ. ನನ್ನ ಮೈ ಉರಿದು ಹೋಯಿತು. ಮೇಲಿನಧಿಕಾರಿಗಳಿಗೆ ದೂರೋಣ ಅಂದ್ರೆ, ಬೇಲಿನೇ ಎದ್ದು ಹೊಲ ಮೇಯುವ ಸ್ಥಿತಿಯನ್ನು ನಾನೇ ಕಣ್ಣಾರೆ ಕಂಡಿದ್ದೆನಲ್ಲ. ಏನು ಪ್ರಯೋಜನವಿಲ್ಲ ಎಂದು ಅವನು ಕೇಳಿದಷ್ಟು ಹಣ (ಲಂಚ!!!) ತೆತ್ತು ಆ ರಿಪೋರ್ಟ್ ತೆಗೆದುಕೊಂಡಾಗ ಅದರಲ್ಲಿ, ಹಿಂದೆ ಆ ತಾಲ್ಲೂಕು ಮಟ್ಟದ ಕಚೇರಿಗೆ ಬಂದಿದ್ದ ಆ ವಯೋವೃದ್ದ ನನ್ನ ಮುಖವನ್ನು ನೋಡಿ ಅಣಕಿಸಿ ನಕ್ಕಂತೆ ಭಾಸವಾದಾಗ ನನ್ನ ಮುಖ ಇಂಗು ತಿಂದ ಮಂಗನಂತಾಗಿತ್ತು!!
 ಸತೀ
-

Friday, October 22, 2010

"ಒಂದೇ ನಾಣ್ಯದ ಎರಡು ಮುಖಗಳು"

"ಒಂದೇ ನಾಣ್ಯದ ಎರಡು ಮುಖಗಳು"

ಹೊರಟಿದ್ದಾಗ ಒಂದು ದಿನ ರೈಲಿನಲಿ ಪ್ರಯಾಣ
ಕಂಡಿದ್ದೆ ನಾನು ಒಂದೇ ನಾಣ್ಯದ ಎರಡು ಮುಖಗಳ ಚಿತ್ರಣ||

ಕಂಕುಳಲ್ಲಿ ಹಸುಗೂಸನೊತ್ತು ಬಂದಳು ಒಬ್ಬ ಹೆಣ್ಣು ಮಗು
ದಯೆ ತೋರಿ ದಾನ ಮಾಡಿ ಎಂದು ಕೇಳಿ ಬರುತ್ತಿತ್ತು ಅವಳ ಕೂಗು
ಹೇಳುತ್ತಿದ್ದರೆಲ್ಲಾ ಚಿಲ್ಲರೆ ಇಲ್ಲ ಮುಂದಕ್ಕೆ ಹೋಗು||

ಬಂದವಷ್ಟರಲ್ಲಿ ತಿಂಡಿ ತಿನಿಸು ಮಾರುವವರ ಗಾಡಿಗಳು
ಚಿಲ್ಲರೆ ಇಲ್ಲವೆಂದವರೆಲ್ಲ ಕೊಳ್ಳುತ್ತಿದ್ದರು ತಿಂಡಿಗಳ ಪ್ಯಾಕೆಟ್ಟುಗಳು
ತಿಂದು ಸಾಕಾದಾಗ ಬಿಸಾಡಿದ್ದರು ಅಲ್ಲಲ್ಲಿ ಬಿಸ್ಕತ್ತು ತುಂಡುಗಳು||

ಮುಂದಕ್ಕೆ ಹೋಗಿದ್ದ ಆ ಮಗು ಅಲ್ಲಿಗೆ ಮತ್ತೆ ಬಂದಳು
ನೆಲಪಾಲಗಿದ್ದ ಬಿಸ್ಕತ್ತು ತುಂಡುಗಳ ಹೆಕ್ಕುತ್ತಿದ್ದಳು
ಬಲವಂತವಾಗಿ ಆ ಹಸುಗೂಸಿನ ಬಾಯಿಗೆ ತುರುಕುತ್ತಿದ್ದಳು||

ಕೆಲಕಾಲದಲಿ ಬಂದವು ಕೆಲವು ಹಿಜಡಾ ಗುಂಪುಗಳು
ಬೇಡುವ ಮೊದಲೇ ಅವರ ಕೈಸೇರುತ್ತಿದ್ದವು ರೂಪಾಯಿ ನೋಟುಗಳು
ಸಿಗದಿದ್ದರೆ ಕೇಳಿಬರುತ್ತಿದ್ದವು ಅವರ ಬಾಯಿಂದ ಅವ್ಯಾಚ್ಯ ಬೈಗುಳಗಳು||

ಈ ಬೈಗುಳಗಳ ಸುರಿಮಳೆ, ಆ ಮಗುವಿನ ದೀನ ಮೊರೆ
ಎರಡೂ ಆಗಿತ್ತು ಬಡತನ, ಹಸಿವಿನದೇ ಕರೆ
ಆದರು ಅವನ್ನು ಈಡೆರಿಸಿಕೊಂಡ ಬಗೆ, ಒಂದೇ ನಾಣ್ಯದ ಎರಡು ಮುಖಗಳೇ ಖರೆ!!

-ಸತೀ
 
 

Thursday, October 21, 2010

ನೆನಪುಗಳ ಮಾತು ಮಧುರ

ಮೊದಲನೆ ದಿನ ಅಮ್ಮ ಶಿಶುವಿಹಾರಕ್ಕೆ ಬಿಟ್ಟು ಬಂದಾಗ
ರೊಂಯ್ ಎಂದು ರಚ್ಚೆ ಹಿಡಿದು ಉಸಿರುಕಟ್ಟಿ ಅರಚುತ್ತಿದ್ದಾಗ
ಆಯಾ ತಲೆ ನೇವರಿಸಿ ಕೊಟ್ಟಿದ್ದಳು ಹಸಿರು ಕವರಿನ ಪ್ಯಾರಿ ಚಾಕೊಲೆಟ್ಟು||
ಬಾಲ್ಯದ ಗೆಳೆಯರೊಡನೆ ಹಳ್ಳಕೊಳ್ಳ ಎನ್ನದೆ ಆಡುತ್ತಿದ್ದಾಗ
ದೊಪ್ ಎಂದು ಬಿದ್ದು ಮಂಡಿ ಚಿಪ್ಪು ಎಗರಿದ್ದಾಗ
ಆ ನೋವಿನ ಜೊತೆ ಇನ್ನೊಂದು ನೋವು ಕೊಟ್ಟಿತ್ತು ಅಪ್ಪನ ದೊಣ್ಣೆ ಪೆಟ್ಟು||
ತುಂಟತನ ಜಾಸ್ತಿ ಆಯ್ತು ಎಂದು ಎಲ್ಲರೂ ದೂರುತ್ತಿದ್ದಾಗ
ಆಟ ಜಾಸ್ತಿ, ಪಾಠ ಕಡಿಮೆ ಆದರೂ ಪ್ರಥಮದರ್ಜೆಯಲೇ ಪಾಸಾದಾಗ
ಅಪ್ಪ ಪ್ರೀತಿಯಿಂದ ಕೊಡಿಸಿದ್ದರು ಚೆಂದದ ಗಡಿಯಾರ ನೋಡಿ ನನ್ನ ಸರ್ಟಿಫಿಕೆಟ್ಟು||
ಯೌವ್ವನ-ಕಾಲೇಜು ಎರಡೂ ಹೊಸ ಅನುಭವಗಳನು ನೀಡುತ್ತಿದ್ದಾಗ
ಆಪ್ತ ಸ್ನೇಹಿತರೊಡನೆ ಸ್ನೇಹದ ಕಡಲಿನಲಿ ವಿಹರಿಸುತ್ತಿದ್ದಾಗ
ಹೋಗಿ ಸತ್ಪ್ರಜೆಗಳಾಗಿ ಎಂದು ಕಳಿಸಿದ್ದರು ಕಾಲೇಜಿನಿಂದ ಪ್ರಮಾಣಪತ್ರ ಕೊಟ್ಟು||

ವಿಧ್ಯಾರ್ಜನೆಯಾಗಿ ಹೊಟ್ಟೆಪಾಡಿಗಾಗಿ ಕೆಲಸವನರಸುತ್ತಿದ್ದಾಗ
ಬೇರೆ ಊರಿನಲಿ ನೌಕರಿ ಸಿಕ್ಕಿ ಒಂಟಿಯಾಗಿ ದಿನದೂಡುತ್ತಿದ್ದಾಗ
ಮಾವನಮನೆಯವರು ನನ್ನ ಮದುವೆ ಮಾಡಿದ್ದರು ರತ್ನದಂತ ಮಗಳನು ಕೊಟ್ಟು||
ನಾವಿಬ್ಬರೂ ಸುಖ ಸಂಸಾರ ಮಾಡುತ್ತಿದ್ದಾಗ
ಸರಸ - ವಿರಸ, ನೋವು ನಲಿವು ಎರಡನ್ನು ಸಮನಾಗಿ ಸ್ವೀಕರಿಸಿದಾಗ
ನನ್ನ ಮನ ನುಡಿಯುತ್ತಿತ್ತು ನೀನು ಒಂದು ಸ್ವತಃ ಮನೆ ಕಟ್ಟು||

ಬಾಳಸಂಗಾತಿಯು ನನ್ನ ಮನದಾಸೆ ಬೆಂಬಲಿಸಿದಾಗ
ಸಣ್ಣ ಉಳಿತಾಯದ ಜೊತೆಗೆ, ಬ್ಯಾಂಕ್ ಸಹ ಸಾಲ ಕೊಡಲು ಮುಂದಾದಾಗ
ಕಟ್ಟಿ ಒಂದು ಪುಟ್ಟ ಗೂಡನು ಆಹ್ವಾನಿಸಿದೆವು ಬಂಧುಬಳಗದವರನು ಆಮಂತ್ರಣ ಕೊಟ್ಟು||

ಸುಖವಾಗಿ ಸಂಸಾರ ನಡೆಸುತ್ತಾ, ನೆಮ್ಮದಿಯ ನಿಟ್ಟುಸಿರು ಬಿಟ್ಟು ಕುಳಿತಾಗ
ಬಾಲ್ಯದಿಂದ ಇಂದಿನವರೆಗಿನ ಮಧುರ ನೆನಪುಗಳು ಮನದಲಿ ಮೂಡಿ ಬಂದಾಗ
ಬರೆಯಲು ಕೂತೆ ಈ ಕವನವನು ನನ್ನದೇ ಆದ ಒಂದು ರೂಪು ಕೊಟ್ಟು||
-ಸತೀ



 
 

Wednesday, October 20, 2010

ಅಂತರ್ಜಾಲದಲಿ ಸಿಕ್ಕ ಆತ್ಮೀಯ ಅಣ್ಣ

   ನಾವು ಕುಳಿತಿದ್ದ ವಿಮಾನ ಮುಂಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು, ಮಧ್ಯರಾಷ್ಟ್ರಗಳನು ಹಾರಿ, ಅಟ್ಲಾಂಟಿಕ್ ಸಾಗರವನ್ನು ದಾಟಿ ಅಮೇರಿಕಾದ ನೆಲದಲ್ಲಿ ಇಳಿಯಿತು. ವಿಸಾ, ಪಾಸ್ ಪೋರ್ಟ್, ಇತರ ಕಾಗದಗಳ ತಪಾಸಣೆಯಾಗಿ ಆ ದೇಶದೊಳಗೆ ಕಾಲಿರಿಸುವ ಅನುಮತಿ ದೊರೆಯಿತು. ನಂತರ ಅಲ್ಲಿಂದ ಇನ್ನೊಂದು ಸಣ್ಣ ವಿಮಾನವನೇರಿ ಲುಪಬೇಕಾದ ನಿಲ್ದಾಣ ತಲುಪಿ, ಟಾಕ್ಸಿಯನಿಡಿದು ನಮಗಾಗಿ ಕಾದಿರಿಸಿದ ಹೋಟೆಲನು ತಲುಪಿದೆವು. ಎರಡು ದಿನಗಳಿಂದ ಸತತವಾದ ಪ್ರಯಾಣ, ಪೂರ್ವ-ಪಶ್ಚಿಮ ದೇಶಗಳ ನಡುವಿನ ಸಮಯದ ಅಂತರ, ದೇಹವನ್ನು ಆಯಾಸಗೊಳಿಸಿದ್ದರೆ, ನನ್ನವರನ್ನೆಲ್ಲಾ ಬಿಟ್ಟು ಇನ್ನು ಎರಡು ವರ್ಷಗಳ ಕಾಲ ವಿದೇಶದ ಆ ಸಂಸ್ಕೃತಿ, ಭಾಷೆ, ನಾಗರೀಕತೆ ಎಲ್ಲವನ್ನು ಅನುಸರಿಸಿ ನಡೆಯಬೇಕಲ್ಲ ಅಂತ ಮನಸ್ಸು ಆಯಾಸಗೊಂಡಿತ್ತು. ದೇಹ ಹಾಗು ಮನಸ್ಸು ಎರಡು ವಿಶ್ರಾಂತಿ ಬಯಸಿತ್ತು. ಕೊಠಡಿಯಲ್ಲಿ ಸಿಕ್ಕ ಬ್ರೆಡ್, ಬಿಸ್ಕತ್ತು, ಹಣ್ಣು, ಕೋಲಾ ಕುಡಿದು ಹಾಸಿಗೆಯಲ್ಲಿ ಉರುಳಿ ಬೆಳಿಗ್ಗೆ ಎದ್ದಾಗ ೭.೦೦ ಘಂಟೆಯಾಗಿತ್ತು.
          ಅಂತೂ ಇಂತೂ ಒಂದು ವಾರದಲ್ಲಿ ದೇಹ ಹಾಗು ಮನಸ್ಸು ಎರಡು ಹೊಸ ಸಮಯ, ಜನ, ಭಾಷೆ, ಸಂಸ್ಕೃತಿಗೆ ಹೊಂದಿಕೊಂಡು ದೈನಿಕ ಚಟುವಟಿಕೆ ಆರಂಭವಾಯಿತು. ಹೊಸ ಕೆಲಸ ಉತ್ಸಾಹ ತರುತ್ತಿತ್ತು. ಬೆಳಗಿನಿಂದ ಸಂಜೆವರೆಗೂ, ಸೋಮವಾರದಿಂದ ಶುಕ್ರವಾರದವರೆಗಿನ ಸತತ ದುಡಿತಕ್ಕೆ ಪ್ರತಿಫಲ ಎಂಬಂತೆ ಶನಿವಾರ-ಭಾನುವಾರದ ಎರಡು ದಿನಗಳ ರಜೆ ಮನಸ್ಸಿಗೆ ನವಚೈತನ್ಯ ತುಂಬುತ್ತಿತ್ತು. ಮೊದಲ ೫-೬ ತಿಂಗಳು, ರಜೆ ದಿನಗಳಲ್ಲಿ ಹತ್ತಿರದ ನೋಡಬೇಕಾದ ಸ್ಥಳಗಳನ್ನೆಲ್ಲಾ ನೋಡಿಯಾಯಿತು. ಊರಿನಿಂದ ತಂದಿದ್ದ ಎಲ್ಲಾ ಕನ್ನಡ ವಿಡಿಯೋ ಚಿತ್ರಗಳನ್ನು ತಿರುಗಿ ತಿರುಗಿ ನೋಡಿಯಾಯಿತು. ಮನಸ್ಸು ಮೆಲ್ಲಗೆ ನಮ್ಮ ಭಾಷೆ, ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದೇನೇನೋ ಎಂಬಂತೆ ವರ್ತಿಸತೊಡಗಿತು. ಏನಾದರು ಬದಲಾವಣೆ ಬೇಕು ಅನ್ನಿಸತೊಡಗಿತು. ಅಂತಹ ಸಮಯದಲ್ಲಿ ನನಗೆ ಸಹಾಯಕ್ಕೆ ಬಂದಿದ್ದು ಎಲ್ಲೆಡೆ ಬೃಹದಾಕಾರವಾಗಿ ಬೆಳೆದು, ವಿಶ್ವವನ್ನೆ ತನ್ನ ಹಿಡಿತದೊಳಗೆ ಇಟ್ಟುಕೊಂಡಿರುವ ವಿವಿಧ ಅಂತರ್ಜಾಲ ತಾಣಗಳು. ಸರಿಯಾದ ರೀತಿಯಲ್ಲಿ ಅಂತರ್ಜಾಲವನ್ನು ಉಪಯೋಗಿಸಿಕೊಂಡರೆ ಅದರಿಂದ ಆಗುವ ಅನುಕೂಲಗಳನು ವರ್ಣಿಸಲಸಾದ್ಯ. ಅದೇ ರೀತಿ ಅದನ್ನು ದುರುಪಯೋಗಪಡಿಸಿಕೊಂಡು ಅದರಿಂದ ಹಾಳಾಗಿರುವ ಎಷ್ಟೊ ವ್ಯಕ್ತಿಗಳ ನಿದರ್ಶನ ಕೂಡ ಉಂಟು.

 ನಾನೋ ಮೊದಲಿನಿಂದ ಕನ್ನಡ ಭಾಷೆ, ಸಾಹಿತ್ಯ, ಚಿತ್ರಗೀತೆ, ಭಾವಗೀತೆಗಳ ಪ್ರೇಮಿ. ಕನ್ನಡದ ಅಂತರ್ಜಾಲ ತಾಣಗಳನ್ನು ನಿರಂತರವಾಗಿ ನೋಡುವುದು ನನ್ನ ಒಂದು ಅಭ್ಯಾಸವಾಗಿ ಹೋಯಿತು. ಹಾಗೆ ನೋಡುವಾಗ ಒಂದು ತಾಣ, ಕನ್ನಡ ಚಲನಚಿತ್ರದ ಹಾಡುಗಳು, ಸನ್ನಿವೇಶಗಳಿಗಾಗಿಯೇ ಸೀಮಿತವಾಗಿದ್ದುದನ್ನು ಕಂಡೆ. ಅನೇಕ ಜನ ವಿಧ್ಯಾಬ್ಯಾಸಕ್ಕಾಗಿ, ಕೆಲಸಕ್ಕಾಗಿ, ವ್ಯಾಪಾರಕ್ಕಾಗಿ ತಾಯ್ನಾಡನ್ನು ಬಿಟ್ಟು ವಿಶ್ವದೆಲ್ಲೆಡೆ ಹರಡಿದ್ದಾರೆ. ಅವರೆಲ್ಲ ಬಿಡುವಿನ ವೇಳೆಯಲ್ಲಿ ಇಂತಹ ಅಂತರ್ಜಾಲ ತಾಣಗಳಿಗೆ ಭೇಟಿ ಮಾಡಿ ನಮ್ಮ ಭಾಷೆ, ಸಂಸ್ಕೃತಿಗಳ ನಿಕಟ ಸಂಪರ್ಕ ಇಟ್ಟುಕೊಂಡು ಸಂತೋಷದಿಂದಿರುವುದನ್ನು ಕಂಡೆ. ಅಂತಹ ಜನರಿಗಾಗಿಯೇ, ಅನೇಕ ಕನ್ನಡಾಭಿಮಾನಿಗಳು, ಕೆಲವು ಅಂತರ್ಜಾಲ ತಾಣಗಳಲ್ಲಿ ತಮ್ಮದೆ ಆದ ಪುಟ ತೆರೆದು ಅದರಲ್ಲಿ ಕನ್ನಡ ಭಾವಗೀತೆಗಳು, ಭಕ್ತಿಗೀತೆಗಳು, ಚಿತ್ರಗೀತೆಗಳು, ಹಾಸ್ಯ ಸನ್ನಿವೇಶಗಳು ಮುಂತಾದವುಗಳನ್ನು ಹಾಕಿ ತಮ್ಮ ಕೈಲಾದ ಅಳಿಲು ಸೇವೆಯನ್ನು ಹೊರದೇಶದಲ್ಲಿರುವ ನಮ್ಮಂತವರಿಗಾಗಿ ಮಾಡುತ್ತಿರುವುದರ ಅರಿವಾಯ್ತು. ಅಂತವರ ಪುಟಗಳನು ಭೇಟಿ ಮಾಡೋದು, ಅವರು ಹಾಕಿರುವ ಹಾಡುಗಳನ್ನು ನೋಡೋದು, ಕೇಳೊದು, ಹಾಕಿದವರಿಗೆ  ಧನ್ಯವಾದ ತಿಳಿಸೋದು ನನ್ನ ನಿರಂತರ ಅಭ್ಯಾಸಗಳಲ್ಲೊಂದಾಯ್ತು.
          ಹೀಗೆ ನನ್ನ ವಿಧ್ಯಾಭ್ಯಾಸ, ಸಂಶೋಧನೆ, ಸೆಮಿನಾರ್ ಎಲ್ಲಾ ಒಂದೆಡೆ ಸಾಗುತ್ತಿದ್ದರೆ, ಬಿಡುವಿನಲ್ಲಿ ಈ ಅಂತರ್ಜಾಲ ತಾಣಗಳ ಮೂಲಕ ಕೆಲವು ಗೆಳೆಯ ಗೆಳತಿಯರ ಪರಿಚಯವೂ ಆಗ ತೊಡಗಿತು. ಅದರಲ್ಲಿ ಒಬ್ಬ ವ್ಯಕ್ತಿ ತಮ್ಮ ಪುಟದಲ್ಲಿ ಅಸಂಖ್ಯಾತ ಹಳೆಯ ಕನ್ನಡ ಚಿತ್ರಗೀತೆಗಳು, ಚಿತ್ರ ಸನ್ನಿವೇಶಗಳನ್ನು ಹಾಕಿರುವುದು ನನ್ನ ಗಮನಕ್ಕೆ ಬಂತು. ಆಕಾಶವಾಣಿಯಲ್ಲೂ, ದೂರದರ್ಶನದ ಅನೇಕ ಚಾನಲ್ಗಳಲ್ಲೂ ಸಿಗದಂತಹ ೬೦, ೭೦, ೮೦ರ ದಶಕದ ಸಾಕಷ್ಟು ಸುಮಧುರ ಹಾಡುಗಳನ್ನು ವೀಕ್ಷಿಸುವ ಸುಯೋಗ ಅವರ ಪುಟದಲ್ಲಿ ಸಿಕ್ಕಿತು. ಅವರ ಮುಖಪುಟದಲ್ಲಿ ಅವರಿಗೆ ಅಭಿನಂದನೆ ತಿಳಿಸಿ ವಿಶ್ವದೆಲ್ಲೆಡೆಯಿಂದ ಬಂದಿದ್ದ ಲೆಕ್ಕವಿಲ್ಲದ್ದಷ್ಟು.ಸಂದೇಶಗಳನು ಹಾಗು ಆ ಸಂದೇಶಗಳಿಗೆಲ್ಲಾ ಇವರು ಕಳುಹಿಸಿರುವ ಮರುಸಂದೇಶಗಳನು ಕಂಡು ಬೆರಗಾಗಿ ಹೋದೆ.
 ಹೀಗೆ ಒಮ್ಮೆ ಅವರ ಪುಟ ನೋಡುವಾಗ ಎಷ್ಟೊ ವರ್ಷಗಳಿಂದ ನೋಡಬೇಕೆಂದು ಕಾಯುತ್ತಿದ್ದ ೬೦ರ ದಶಕದ ಚಿತ್ರವೊಂದರ ಹಾಡು ಅವರ ಚಾನಲ್ ನಲ್ಲಿ ಕಂಡಾಗ ಮನಸ್ಸು ಉಲ್ಲಾಸದಿಂದ ಕುಣಿಯಿತು. ಆ ಹಾಡನ್ನು ಬಹಳಷ್ಟು ಭಾರಿ ವೀಕ್ಷಿಸಿ, ಅದನ್ನು ಹಾಕಿದ ಆ ವ್ಯಕ್ತಿಗೆ ಮನಸಾರೆ ಒಂದು ಅಭಿನಂದನಾ ಪತ್ರ ಕಳಿಸಿ ಆ ವಿಷಯವನ್ನು ಅಲ್ಲೇ ಮರೆತು ಬಿಟ್ಟೆ.

          ಕಾಲ ಯಾರಿಗು ಹೇಳದೆ ಕೇಳದೆ ತನ್ನಷ್ಟಿಗೆ ತಾನೆ ಜರುಗುತ್ತಿತ್ತು. ಕೆಲವು ತಿಂಗಳುಗಳ ನಂತರ ನನ್ನ ಈ-ಸಂದೇಶ ಪೆಟ್ಟಿಗೆಯಲ್ಲಿನ, ಅಪರಿಚಿತ ವ್ಯಕ್ತಿಯ ಒಂದು ಸಂದೇಶ ನನ್ನ ಗಮನ ಸೆಳೆಯಿತು. ಅದನ್ನು ತೆರೆದಾಗ ಅದರಲ್ಲಿದ್ದ ಒಕ್ಕಣೆ ಇಷ್ಟು "ನಮಸ್ಕಾರ,  ನಾನು ಹಾಕಿದ್ದ ಹಾಡು ನಿಮಗೆ ಮೆಚ್ಚಿಗೆಯಾಗಿರುವುದು ನನಗೆ ಸಂತೋಷ ತಂದಿದೆ. ನಿಮಗೆ ಇಷ್ಟವಾದ ಇನ್ನೂ ಅನೇಕ ಹಾಡುಗಳನ್ನು ಹಾಕಲು ನಾನು ಪ್ರಯತ್ನಿಸುವೆ. ತಡವಾದ ಉತ್ತರಕ್ಕೆ ಕ್ಷಮಿಸಿ, ಧನ್ಯವಾದಗಳು". ಆ ಸಂದೇಶವನ್ನು ನೋಡಿ ನನಗೆ ಈಗಲೂ ಇಂತಹ ಪ್ರಾಮಾಣಿಕ ವ್ಯಕ್ತಿಗಳು ಇರ್ತಾರ ಅಂತ ಸಂದೇಹವಾಯ್ತು. ಅಲ್ಲಿಂದ ಆರಂಭವಾಯ್ತು ನನ್ನ ಹಾಗು ಅವರ ನಡುವೆ ಅಂತರ್ಜಾಲದ ಮೂಲಕ ಸಂದೇಶ/ ವಿಚಾರ ವಿನಿಮಯ. ನನಗೆ ಚಿಕ್ಕಂದಿನಿದಲೂ ಪ್ರಿಯವಾದ, ಎಲ್ಲೂ ಸಿಗದ ಅನೇಕ ಹಾಡುಗಳ ಪಟ್ಟಿಯನ್ನೇ ಅವರಿಗೆ ಕಳುಹಿಸಿದೆ. ಅವರಂತೂ ಸಾಕಷ್ಟು ಪ್ರಯತ್ನಿಸಿ, ಸಾಧ್ಯವಾದಷ್ಟು ಹಾಡುಗಳನ್ನು ಕೆಲವೇ ದಿನಗಳಲ್ಲಿ ಹಾಕಿಬಿಡ್ತಾ ಇದ್ದರು. ಈ ರೀತಿಯಿಂದ ನಮ್ಮ ನಡುವೆ ಒಂದು ಆತ್ಮೀಯ ಬಾಂಧವ್ಯ ಬೆಳೆಯ ತೊಡಗಿತು.
          ನಾನು ಸ್ವಲ್ಪ ಭಾವಜೀವಿ. ವಿದೇಶದಲ್ಲಿನ ನನ್ನ ಅನುಭವಗಳನ್ನು ತಾಯ್ನಾಡಿನಲಿರುವ ನನ್ನ ಸ್ನೇಹಿತರು, ಕುಟುಂಬದವರೊಡನೆ ಈ-ಸಂದೇಶ, ಪತ್ರಗಳ ಮೂಲಕ ಹಂಚಿಕೊಳ್ಳುವುದು ನನ್ನ ಒಂದು ಹವ್ಯಾಸ. ಆರಂಭದಲ್ಲಿ ಕೆಲವರಿಂದ ನನ್ನ ಸಂದೇಶಗಳಿಗೆ ಮರುಸಂದೇಶಗಳು ಬರುತ್ತಿತ್ತು. ಕ್ರಮೇಣ ಎಲ್ಲ ಕಡಿಮೆಯಾಯಿತು. ನಿರೀಕ್ಷಿಸಿದ್ದ ಉತ್ತರ ಬಾರದಿದ್ದಾಗ ನನಗೆ ನಿರುತ್ಸಾಹ, ಕೋಪ ಎಲ್ಲ ಬರುತ್ತಿತ್ತು. ಆಗ ನನ್ನ ಭಾವನೆಗಳನು ಸ್ಪಂದಿಸುವ, ನನ್ನ ಪತ್ರಗಳಿಗೆ ಮರುಸಂದೇಶ ಕಳುಹಿಸುವ ಒಬ್ಬ ಸ್ನೇಹಿತನ ಸಂಗಕ್ಕಾಗಿ ಮನ ಹಾತೊರೆಯುತ್ತಿತ್ತು. ಅದಕ್ಕೆ ಸರಿಹೊಂದುವಂತೆ ಕೇವಲ ಅಂತರ್ಜಾಲದಲ್ಲಿ ಪರಿಚಯವಾಗಿ, ಒಬ್ಬರನ್ನೊಬ್ಬರು ನೋಡದೆ, ಮಾತನಾಡದಿದ್ದರು ಆಗಾಗ ಆ ಹೊಸ ಸ್ನೇಹಿತನಿಂದ ಬರುತ್ತಿದ್ದ ಈ-ಸಂದೇಶಗಳನ್ನು ನೋಡಿ ನನಗೆ ಮರಳುಗಾಡಿನಲ್ಲಿ ಅಲೆಯುವಾಗ ಓಯಾಸಿಸ್ ಸಿಕ್ಕಷ್ಟೇ ಆನಂದವಾಗುತ್ತಿತ್ತು.
ಹೀಗೆ ಕಾಲಚಕ್ರ ಉರುಳುವಾಗ, ಒಮ್ಮೆ ಆ ವ್ಯಕ್ತಿಗೆ ನನ್ನ ನಿಜವಾದ ಹೆಸರು, ಮಾಡುತ್ತಿರುವ ಹುದ್ದೆ ಎಲ್ಲದರ ಬಗ್ಗೆ ತಿಳಿಸಬೇಕೆಂಬ ಮನಸ್ಸಾಗಿ ಅಂತೆಯೇ ಒಂದು ಸಂದೇಶ ಕಳುಹಿಸಿದೆ. ನನ್ನ ಬಗ್ಗೆ ತಿಳಿದ ಅವರು ಸಹ ತಮ್ಮ ಹೆಸರು, ಕಾರ್ಯ ಕ್ಷೇತ್ರ, ಅವರ ಕುಟುಂಬದ ಬಗ್ಗೆ ಮಾಹಿತಿ ನೀಡಿದರು. ಆನಂತರ ನಮ್ಮ ದೂರವಾಣಿ ಸಂಖ್ಯೆಗಳು ಪರಸ್ಪರವಾಗಿ ದೊರೆತವು. ಅಸಂಖ್ಯಾತ ಹಳೆಯ ಹಾಡುಗಳನ್ನು ಅಂತರ್ಜಾಲದಲ್ಲಿ ಹಾಕಿ ಹೆಸರಾಗಿದ್ದ ಅವರನ್ನು ಯಾರೋ ಬರೀ ಸಿನಿಮಾ ಹುಚ್ಚು ಇರುವ ವ್ಯಕ್ತಿ ಇರಬೇಕು ಎಂದುಕೊಂಡಿದ್ದ ನನಗೆ ಅವರ ಬಗ್ಗೆಯ ಮಾಹಿತಿ ಕಂಡು ಅವರ ಮೇಲಿದ್ದ ಅಭಿಮಾನ ದ್ವಿಗುಣಗೊಂಡಿತು. ಅವರು ಡಾಕ್ಟರೇಟ್ ಮುಗಿಸಿ, ಪ್ರತಿಷ್ಟಿತ ಕಂಪನಿಯಲ್ಲಿ ಗಣ್ಯ ಹುದ್ದೆಯನ್ನಲಂಕರಿಸಿ ಬಹಳ ವರ್ಷಗಳ ಕಾಲ ವಿದೇಶದಲ್ಲಿ ನೆಲೆಸಿ ಈಗ ತಾಯ್ನಾಡಿಗೆ ಮರಳಿರುವರು ಎಂದು ತಿಳಿದಾಗ ಅವರ ಮೇಲಿನ ವಿಶ್ವಾಸ, ಪ್ರೀತಿ, ಆತ್ಮೀಯತೆ ಎಲ್ಲಾ ಜಾಸ್ತಿ ಆಗ ತೊಡಗಿತು.

                    ಮೊದಲ ದಿನ ಅವರ ಧ್ವನಿಯನ್ನು ದೂರವಾಣಿಯಲ್ಲಿ ಕೇಳಿ ನನ್ನ ಮನದಲ್ಲಿ ವರ್ಷಋತುವಿನ ಕಾರ್ಮೋಡ ಕಂಡ ನವಿಲು ನರ್ತಿಸುವಂತಹ ಅನುಭವವಾಯಿತು.  ಮಾತುಗಳಲ್ಲಿನ ಆ ಆತ್ಮೀಯತೆ, ಜೇನಿನಲ್ಲಿ ಅದ್ದಿ ತೆಗೆದಂತಹ ನಗು ಬೆರೆತ ಆ ಧ್ವನಿ, ಪದಗಳ ಉಚ್ಚಾರಣೆ, ಮುಗ್ಧತೆ ಅಬ್ಬಬ್ಬಾ!!!
ನಂತರದ ನಮ್ಮ ಭೇಟಿ ವಿಡಿಯೋ ಕಾನ್ಫರೆನ್ಸ್ ಮೂಲಕ. ಆ ವ್ಯಕ್ತಿಯನ್ನು ನನ್ನ ಗಣಕಯಂತ್ರದ ಪರದೆಯ ಮೇಲೆ ನೋಡಿದಾಗ ನನ್ನ ಕಂಗಳಲ್ಲಿ ಆನಂದಭಾಷ್ಪ!! ವಿದೇಶದಲ್ಲಿದ್ದ ನನಗೆ, ತಮ್ಮ ಹಾಡುಗಳ ಮೂಲಕ ನನ್ನ ತಾಯ್ನಾಡಿಗೆ ಸಾವಿರಾರು ದೂರದಲ್ಲಿದ್ದರೂ ಬಹಳ ಹತ್ತಿರದಲ್ಲೇ ಇದ್ದಂತ ಭಾವನೆ ತರಿಸಿದ್ದ ಆ ಸ್ನೇಹಮಯಿಗೆ ಮನಃಪೂರ್ವಕವಾಗಿ ವಂದಿಸಿದೆ. ಜೊತೆಗೆ ತಮ್ಮ ಮಡದಿ ಮಕ್ಕಳನ್ನೂ ಪರಿಚಯಿಸಿದರು. ಅವರೊಡನೆ ಮಾತನಾಡುವಾಗ ನಾನು ಅವರನ್ನು ಸಾರ್ ಸಾರ್ ಎಂದು ಕೂಗುತ್ತಿದ್ದಾಗ ಅದನ್ನು ಆಕ್ಷೇಪಿಸಿ ಹೆಸರಿಡಿದು ಕೂಗುವಂತೆ ಹೇಳಿದರು. ನನಗಿಂತ ೭-೮ ವರ್ಷಗಳ ಹಿರಿಯರಾದ ಅವರನ್ನು ಹೆಸರಿಡಿದು ಕರೆಯಲು ನನ್ನ ಮನ ಒಪ್ಪಲಿಲ್ಲ. ಆತ್ಮೀಯತೆಯಿಂದ "ಅಣ್ಣಾ" ಎನ್ನೋಣ ಅನ್ನಿಸ್ತಿದೆ ಅಂದೆ. ಅವರು ಏನೂ ಮಾತನಾಡಲಿಲ್ಲ. "ಮೌನಂ ಸಮ್ಮತಿ ಲಕ್ಷಣಂ" ಅಂದುಕೊಂಡು ಹಾಗೆ ಕರೆಯಲಾರಂಭಿಸಿದೆ.
          ನಾನು ಬಹಳವಾಗಿ ಬೇಕೆಂದು ಪರಿತಪಿಸುತ್ತಿದ್ದ ಒಬ್ಬ ಆತ್ಮೀಯ ಅಣ್ಣ, ಬಂಧು, ಸ್ನೇಹಿತನನ್ನು ಒಟ್ಟಾಗಿ ಅವರಲ್ಲಿ ಕಂಡೆ. ಅವರು ನನ್ನ ಪಾಲಿಗೆ "ದೇವರು ಕೊಟ್ಟ ಅಣ್ಣ" ನಾದರು. ನನ್ನ ಕುಟುಂಬದವರಿಂದ, ಸ್ನೇಹಿತರಿಂದ ನಿರೀಕ್ಷಿಸುತ್ತಿದ್ದ ಎಲ್ಲಾ ಪ್ರತ್ಯುತ್ತರಗಳು ಈ ಅಣ್ಣನಿಂದ ಬರುತ್ತಿದ್ದವು. ಅದಕ್ಕಾಗಿಯೇ ನಾನು ಒಮ್ಮೆ ಅವರಿಗೆ "ಅಣ್ಣಾ ನೀವು ನನಗೆ ಕೆಲವು ವಿಷಯಗಳಲ್ಲಿ ನನ್ನ ಒಡಹುಟ್ಟಿದವರಿಗಿಂತ ಮಿಗಿಲು ಎಂದೆ". ಅದಕ್ಕವರು, ಬಹಳ ದೊಡ್ಡ ಮಾತು, ನನ್ನ ಈ ಅಲ್ಪ ಕಾರ್ಯವನ್ನು ಮೆಚ್ಚಿಕೊಂಡಿರೋದು ನಿಮ್ಮ ದೊಡ್ಡ ಗುಣ. ನನ್ನ ಕಾರ್ಯಕ್ಕೆ ನಾನು ಬಹಳ ದಿನಗಳಿಂದ ಹುಡುಕುತ್ತಿದ್ದ ಒಬ್ಬ ತಮ್ಮ ಸಿಕ್ಕಿದ. ಅದಕ್ಕಿಂತಾ ದೊಡ್ಡ ಬಹುಮಾನ ಸಿಗಲು ಸಾಧ್ಯವೆ ಇಲ್ಲ ಅಂದ್ರು". ಇದನ್ನಲ್ಲವೇ "ತುಂಬಿದ ಕೊಡ ತುಳುಕೊಲ್ಲ" ಅನ್ನೋದು!
          ಇನ್ನೊಂದು ವಿಶೇಷ ಅಂದ್ರೆ, ಆ ಅಣ್ಣ ವಾಸಿಸೋದು ಸಹ ನನ್ನ ಹುಟ್ಟೂರಿನಲ್ಲೆ! ಅವರ ಮನೆ ವಿಳಾಸ ಎಲ್ಲ ಕೊಟ್ಟು ಊರಿಗೆ ಬಂದಾಗ ಭೇಟಿ ಆಗೋಣ ಅಂತ ತಿಳಿಸಿದ್ರು. ಆ ಅಣ್ಣನ ಭೇಟಿಗಾಗಿ ನನ್ನ ಮನ ಹಾತೊರೆಯುತ್ತಿತ್ತು.
          ಈ ನಡುವೆಯೇ ನನ್ನ ಸಂಶೋಧನೆ ಎಲ್ಲ ಮುಗಿದು, ವಿಶ್ವವಿದ್ಯಾಲಯ ಗೊತ್ತುಪಡಿಸಿದ್ದ ಗುರಿಯನ್ನು ಮುಟ್ಟಿ, ಮಾಡಬೇಕಾದ ಎಲ್ಲ ಕೆಲಸಗಳನ್ನು ಮುಗಿಸಿ ಆನಂದದಿಂದ ತಾಯ್ನಾಡಿಗೆ ಮರಳಿದೆ.
          ಮನೆಗೆ ಬಂದ ೩-೪ ದಿನಗಳಲ್ಲೇ ಅಣ್ಣನಿಂದ ದೂರವಾಣಿ ಬಂತು. ನಾಳೆ ಸಂಜೆ ನಿಮ್ಮ ಮನೆಗೆ ಅಪ್ಪಾಜಿ, ಅಮ್ಮನನ್ನು, ನಿಮ್ಮನ್ನು ನೋಡಲು ಬರ್ತೇನೆ ಅಂದ್ರು. ಅವರ ವಿಶ್ವಾಸಕ್ಕೆ ಮೂಕನಾಗಿ, ಸಂತೋಷದಿಂದ ಅವರಿಗೆ ಆಹ್ವಾನವಿತ್ತೆ.
          ದೊಡ್ಡ ದೊಡ್ಡ ನಗರಗಳಲ್ಲಿ ಸಂಜೆಯ ವೇಳೆ ಕಾರಿನಲ್ಲಿ ನಿಗದಿತ ವೇಳೆಯಲ್ಲಿ ನಿಗದಿತ ಸ್ಥಳ ತಲುಪಲು ಹರಸಾಹಸ ಪಡಬೇಕು. ಅಣ್ಣ ಕೆಲಸ ಮಾಡುತ್ತಿದ್ದ ಕಚೇರಿಯಿಂದ ನಮ್ಮ ಮನೆಗೆ ಸುಮಾರು ೨ ಘಂಟೆಗಳ ಪ್ರಯಾಣ. ದಟ್ಟವಾದ ವಾಹನ ಸಂಚಾರ ಹಾಗು ಅಸ್ಥವ್ಯಸ್ಥವಾದ ರಸ್ತೆಗಳ ಮೇಲೆ ಕಡಿಮೆಯೆಂದರೆ ೩ ಘಂಟೆಯಾದರು ಬೇಕು. ಅದನ್ನೆಲ್ಲ ಅನುಭವಿಸಿ ನಮ್ಮ ಮನೆಯ ಮುಂದೆ  ಬಂದು ನಿಂತ ಕಾರಿನಿಂದ ಇಳಿದ ಅವರನ್ನು ನೋಡಿ ನನಗಾದ ಸಂತೋಷ ಅಷ್ಟಿಷ್ಟಲ್ಲ. ಮಮತೆ-ಪ್ರೀತಿ, ವಾತ್ಸಲ್ಯದಿಂದ ಅವರನ್ನು ಆಲಂಗಿಸಿ ಒಳಗೆ ಆಹ್ವಾನಿಸಿದೆ. ಮನೆಗೆ ಬಂದಾಕ್ಷಣ ನಮ್ಮ ಮಾತಾಪಿತರ ಕಾಲಿಗೆರಗಿ ನಮಸ್ಕರಿಸಿದರು. ಅವರ ಸರಳ ಸಜ್ಜನತೆಗೆ ನನ್ನ ಎದೆ ಉಬ್ಬಿಬಂತು. ಅವರನ್ನು ಪ್ರತ್ಯಕ್ಷವಾಗಿ ಕಂಡಿದ್ದು ಇದೇ ಮೊದಲಾದರು, ಎಷ್ಟೊ ವರ್ಷಗಳಿಂದ ಚಿರಪರಿಚಿತರೇನೋ ಎಂಬಂತೆ ಭಾಸವಾಯಿತು. ಎಲ್ಲರೊಡನೆ ಪ್ರೀತಿಯಿಂದ ಮಾತನಾಡುತ್ತ ಊಟ ಮಾಡಿದರು. ನಮ್ಮನ್ನು ಅವರ ಮನೆಗೆ ಆಹ್ವಾನಿಸಿ ಎಲ್ಲರಿಗೂ ಶುಭ ಕೋರಿ ಹಿಂದಿರುಗಿದರು. ಕನಸೋ ಇದು ನನಸೋ ಇದು...ನನಗೆ ಗೊತ್ತಾಗಲಿಲ್ಲ. "ಹೇಳಲಾರೆನು, ತಾಳಲಾರೆನು ನನ್ನ ಮನಸಿನ ಭಾವನೆ..." ಎಂಬ ಯಾವುದೋ ಹಳೆಯ ಹಾಡು ಮನದಾಳದಲ್ಲಿ ಗುನುಗುತ್ತಿತ್ತು.

ನಂತರದ ನಮ್ಮ ಭೇಟಿ  ೨ ವಾರಗಳ ಬಳಿಕ ನಾನು ಅವರ ಮನೆಗೆ ಹೋದಾಗ. ನನ್ನ ಮನಸ್ಸು ಅವರನ್ನು ಅಣ್ಣನೆಂದು ಸ್ವೀಕರಿಸಿದಂತೆ, ಅವರ ಮಡದಿ ನನ್ನ ಅತ್ತಿಗೆಯಾದರು. ಅವರ ಮಕ್ಕಳಿಗೆ ನನ್ನನ್ನು "ಚಿಕ್ಕಪ್ಪ" ಅಂತಲೇ ಪರಿಚಯಿಸಿದರು. ಅವರ ಮಾತಾಪಿತರಿಗೆ ನನ್ನನ್ನು "ನಿಮ್ಮ ಕೊನೆಯ ಮಗ" ಎಂದು ಪರಿಚಯಿಸಿದಾಗ ಮೌನದಿಂದ ಮೂಕನಾದೆ. ಅವರೆಲ್ಲರೊಡನೆ ಕಳೆದ ಆ ಕೆಲವು ಘಂಟೆಗಳು ನನ್ನ ಜೀವನದಲ್ಲಿ ಕಳೆದ ಕೆಲವು ಅಮೂಲ್ಯ ಕ್ಷಣಗಳಲ್ಲೊಂದು. ಅಣ್ಣ ಅವರ ಕೆಲಸದ ಬಗ್ಗೆ,ತಾವು ಮನೆಯಲ್ಲಿ ನಡೆಸುವ ಚಿಕ್ಕಪುಟ್ಟ ಸಂಶೋಧನೆಗಳ ಬಗ್ಗೆ, ಬಿಡುವಿನ ವೇಳೆಯಲ್ಲಿ ಅಂತರ್ಜಾಲಕ್ಕೆ ಹಾಡುಗಳನ್ನು ಹಾಕುವ ಬಗ್ಗೆ ವಿವರಿಸಿದರು. ಅತ್ತಿಗೆ ತಯಾರಿಸಿದ ರುಚಿಕರವಾದ ಭೋಜನವುಂಡು, ಅವರೆಲ್ಲರ ಚಿತ್ರಗಳನ್ನು ನನ್ನ ಕ್ಯಾಮೆರ ಕಣ್ಣಿನಿಂದ ಸೆರೆ ಹಿಡಿದು ಅವರಿಂದ ಬೀಳ್ಕೊಂಡು ಮನೆಗೆ ಬಂದೆ.
          ಈಗ ನಾನು ಕೆಲಸ ಮಾಡುತ್ತಿರುವುದು ಬೇರೆ ರಾಜ್ಯದಲ್ಲಿ. ನನ್ನ ಸಂಸಾರದೊಡನೆ ನನ್ನ ಹುಟ್ಟೂರನ್ನು ಬಿಟ್ಟು ನಾನು ಕೆಲಸ ಮಾಡುವ ಊರಿಗೆ ಹಿಂದಿರುಗಿದೆ. ಆಗಾಗ್ಗೆ ಅಣ್ಣನೊಡನೆ ದೂರವಾಣಿಯಲ್ಲಿ ಮಾತು ಕಥೆಯಾಗುತ್ತೆ. ನಮ್ಮ ಕೆಲಸಗಳ ಬಗ್ಗೆ, ಹಳೆಯ ಕನ್ನಡ ಸಿನಿಮಾಗಳ/ ಹಾಡುಗಳ ಬಗ್ಗೆ, ಪ್ರಚಲಿತ ವಿದ್ಯಮಾನಗಳ ಸುತ್ತಾ ನಮ್ಮ ಚರ್ಚೆ ಗಿರಕಿ ಹೊಡೆಯುತ್ತೆ. ಯಾವಾಗಲಾದರೊಮ್ಮೆ ಮನಸ್ಸಿಗೆ ಬೇಸರವಾದಾಗ ಅವರಿಗೆ ಫೋನಾಯಿಸಿ ಮಾತನಾಡಿದರೆ ನನ್ನ ಮನದಲ್ಲಿ ಮತ್ತೆ ಉಲ್ಲಾಸ ಮೂಡುತ್ತದೆ. ಆಗ ನನಗೆ ನೆನಪಾಗುವುದು "ಎಲ್ಲಾದರು ಹೋಗು, ಮರೆಯಾಗು, ಮೊರೆ ಹೋಗು, ನಿನ್ನನು ಬಿಡದೋ ಬಾಂಧವ್ಯ, ಬಿಡದೋ ಮಮತೆಯ ಬಾಂಧವ್ಯ" ಎಂಬ ಮಧುರವಾದ ಹಾಡು. ಹಳೆಯಾದಷ್ಟು ದ್ರಾಕ್ಷಾರಸ (ವೈನ್) ಹುದುಗಿ ಅದರ ರುಚಿ ಹೆಚ್ಚಿದಂತೆ, ದಿನದಿಂದ ದಿನಕ್ಕೆ ಅಣ್ಣನ ಮೇಲಿನ ಅಭಿಮಾನ, ಪ್ರೀತಿ, ಆತ್ಮೀಯತೆ ಹೆಚ್ಚುತ್ತಲೇ ಇದೆ.
          ಹೀಗೆ ಕಾಲಚಕ್ರ ಉರುಳುತ್ತಿದೆ. "ಅಂತರ್ಜಾಲದಲ್ಲಿ ಅನಿರೀಕ್ಷಿತವಾಗಿ ದೊರೆತ ಈ ಅಣ್ಣ" ನೊಡನೆಯ ಬಾಂಧವ್ಯ ಚಿರವಾಗಿರಲಿ ಎಂದು ಸದಾ ಆ ದೇವರಲ್ಲಿ ಬೇಡುತ್ತೇನೆ. ರಕ್ತಸಂಬಂಧ, ಸ್ನೇಹಸಂಬಂಧ ಮುಂತಾದ ಸಂಬಂಧಗಳಿಗಿಂತ ಮಿಗಿಲಾದ ಒಂದು ವಿಶಿಷ್ಟವಾದ ಸಂಬಂಧ ಇದೆ ಅಂತ ಈ ಅಣ್ಣ ಸಿಕ್ಕ ನಂತರ ಸ್ವತಃ ಅನುಭವವಾಯಿತು. ಆ ಅಣ್ಣನಿಗಾಗಿ ನನ್ನ ಮನದಲ್ಲಿ ಮೂಡಿದ ಈ ಸಾಲುಗಳನ್ನು ಬರೆಯುತ್ತ ಇಲ್ಲಿಗೆ ನಿಲ್ಲಿಸುವೆ...

"ಎಂದೋ ಒಮ್ಮೆ ಅಂತರ್ಜಾಲದಲ್ಲಿ ನಿಮ್ಮ ಹಾಡುಗಳನ್ನು ನೋಡಿದೆ
ಈ-ಸಂದೇಶದಲ್ಲಿನ ನಿಮ್ಮ ಸ್ನೇಹಭರಿತ ವಾಕ್ಯಗಳಿಂದ ಆನಂದಗೊಂಡೆ
ವಿಡಿಯೋದಲ್ಲಿ ನಿಮ್ಮ ನಿಶ್ಕಲ್ಮಶ, ವಾತ್ಸಲ್ಯಭರಿತ ಕಂಗಳನ್ನು ಕಂಡು ಭಾವಪರವಶನಾದೆ
ಎದುರಿನಲ್ಲೇ ಪ್ರತ್ಯಕ್ಷವಾದಾಗ ನಿಮ್ಮ ಸರಳ ಸಜ್ಜನತೆ ಕಂಡು ಮಾತುಬಾರದ ಮೂಕನಾದೆ"
 
- ಸತೀ

Tuesday, October 19, 2010

ನಯನ ಮನೋಹರ - ನಯಾಗರ

ಉಕ್ಕಿ ಹರಿಯುತಿಹಳು ನಯಾಗರೆ ನಗುನಗುತಾ,
ಅಮೇರಿಕ, ಕೆನಡಾ ದೇಶಗಳನು ಬೇರ್ಪಡಿಸುತಾ;

ಉಲ್ಲಾಸದ ಭರದಲ್ಲಿ ಕಂಡಳು ಆಳವಾದ ಪ್ರಪಾತ,
ಮುಗ್ಗರಿಸಿ ಮೇಲಿಂದ ಬೀಳಲು ಆಯಿತು ಜಲಪಾತ;





ಅದ ನೋಡಲು ಬರುವರು ಸಹಸ್ರಾರು ಜನ,
ನೋಡಿ ಉದ್ಗರಿಸುವರು ಆಯಿತು ಜೀವನ ಪಾವನ;
ಹೊರಟರೆ "ಮೆಯ್ಡ್ ಆಫ಼್ ಮಿಸ್ಟ್" ದೋಣಿಯಲಿ ವಿಹಾರ,
ಜಲಪಾತದ ತಪ್ಪಲಲಿ ಅನುಭವವಾಗುವುದು ನೀರಿನ ಸಿಂಚನ ಧಾರ;


ರಾತ್ರಿಯಲಿ ಬಣ್ಣ ಬಣ್ಣದ ದೀಪಗಳಿಂದ ಅವಳ ಅಲಂಕಾರ,
ಕೇಳುವುದು ಎಲ್ಲೆಲ್ಲೂ ವೀಕ್ಷಕರ ಹರ್ಷೋದ್ಗಾರ;

ನಿಜವಾಗಿಯೂ ಈ ನಯಾಗರ............ ನಯನ ಮನೋಹರ!!!