Sunday, March 6, 2011

ಧರಣಿ- ವರುಣರ ಪ್ರಣಯ


ಧರಣಿ- ವರುಣರ ಪ್ರಣಯ

ಬರಗಾಲದಿಂದ ಬರಿದಾಗಿದ್ದವು ರೈತರ ಅನ್ನದ ಬಟ್ಟಲುಗಳು,
ಕಾತರದಿ ಮುಗಿಲೆಡೆಗೆ ನೋಡುತ್ತಿದ್ದವು ಅವ ನಯನಗಳು;
ಸುಡುವ ವಿರಹದ ಬೇಗೆಯಿಂದ ಧರಣಿಯು ಬಳಲಿರಲು,
ವರುಣನ ಸಮಾಗಮವ ಕಾಯುತ್ತಿತ್ತು ಅವಳೊಡಲು;



ಧರಣಿಯ ವಿರಹದ 
ಒಡಲುರಿಯು  ಮುಗಿಲು ಮುಟ್ಟಲು, 
ಉನ್ಮತ್ತನಾದ ವರುಣನು ಹರಿಸಿದ ಪ್ರೀತಿಯ ಹೊನಲು;
ವರುಣನರಿಸಿದ ಆ ಪ್ರೀತಿಯ ಹೊಳೆಯಲಿ,
ಮಿಂದು ಪುಳಕಿತಳಾದಳು ಧರಣಿಯು ಹರುಶದಲಿ;


ಅವರಿಬ್ಬರ ಈ ಮಿಲನದ  ಫಲದಿಂದ,
ಚಿಗುರೊಡೆದವು ಪೈರುಗಳು ಧರಣಿಯೊಡಲಿನಿಂದ;
ಸಾಲ ಮಾಡಿದ ರೈತನಿಂದ ತೀರಲವಳೆಲ್ಲ ಬಯಕೆಗಳು,
ದಿನದಿಂದ ದಿನಕೆ ಮೈದುಂಬಿ ಬೆಳೆದಳವಳು;




ಕಂಗೊಳಿಸುತ್ತಿದ್ದವಳ ಕಂಡು ಉನ್ಮತ್ತನಾದ ವರುಣನು, 
ಮಾಡಿದನವಳ ಮೇಲೆ ಮತ್ತೆ ಮತ್ತೆ ಆಕ್ರಮಣವನು;
ತತ್ತರಿಸಿದಳಾ ಅಬಲೆ ತಾಳಲಾರದೆ ಈ ಆಘಾತ,
ಪ್ರಸವಿಸುವ ಮೊದಲೆ ಆಯಿತವಳಿಗೆ ಗರ್ಭಪಾತ;


ನೋಡಿ ವರುಣನ ಹುಚ್ಚು ಪ್ರಣಯದಾರ್ಭಟ,
ಕುಸಿದು ಬಿತ್ತು ಅನ್ನದಾತರ ಸುಂದರ ಆಶಾಕಮ್ಮಟ; ಮಾಡಿದ ಸಾಲಕೆ ಬಡ್ಡಿಯನ್ನು ತೆರಲಾರದ,
ಅನ್ನದಾತನು, ನಿರ್ಧರಿಸಿ ಸಾವಿಗೆ ಶರಣಾದ;
ವರುಣ ಧರಣಿಯರ ಈ ಪ್ರಣಯದಾಟ,
ಮಿತಿಯಾದರೆ ಅನಾವೃಷ್ಠಿ, ಅತಿಯಾದರೆ ಅತೀವೃಷ್ಠಿ!!!!

-ಸತೀ


Friday, January 21, 2011

ರಾಗಿ ರೊಟ್ಟಿ - ಹುಚ್ಚೆಳ್ ಚಟ್ನಿ


ರಾಗಿ ರೊಟ್ಟಿ - ಹುಚ್ಚೆಳ್ ಚಟ್ನಿ

ಮೊನ್ನೆ ಸಂಕ್ರಾಂತಿ ಹಬ್ಬಕ್ಕೆ ಬೇಕಾದ ಎಳ್ಳು, ಬೆಲ್ಲ, ಕಡಲೆ ಬೀಜ ಎಲ್ಲಾ ತರಲೆಂದು ಈಗ ವಾಸಿಸುವ ಪುಣೆ ನಗರದ ಒಂದು ಬಡಾವಣೆಯಲ್ಲಿ ದಿನಸಿ ಅಂಗಡಿಗೆ ಹೋಗಿದ್ದಾಗ ಅಂಗಡಿಯವನಿಗೆ "ತಿಲ್ ದೇದೋ" ಅಂದಾಗ ಅಕಸ್ಮಾತ್ ಆಗಿ ಆತ ಕಪ್ಪು ಎಳ್ಳಿನ ಪ್ಯಾಕೇಟ್ ನನ್ನ ಕೈಲಿತ್ತ. ಬಿಳಿ ಎಳ್ಳನ್ನು ಕೊಡು ಎಂದರೆ ಎಳ್ಳುಂಡೆ ಮಾಡುವುದಕ್ಕೆ ಉಪಯೋಗಿಸುವ ಕಪ್ಪು ಎಳ್ಳು ಕೊಟ್ಟನಲ್ಲ ಅಂದುಕೊಂಡು ಅದನ್ನು ಹಿಂದಿರುಗಿಸಲು ಹೋದಾಗ ಅಪ್ಪಿ ತಪ್ಪಿ ಅದನ್ನು ಸರಿಯಾಗಿ ಗಮನಿಸಿದೆ. ಆಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ಎಳ್ಳು ಕೊಡುವ ಬದಲು ಅವನು ಹುಚ್ಚೆಳ್ಳಿನ ಪ್ಯಾಕೇಟ್ ನನ್ನ ಕೈಲಿತ್ತಿದ್ದ. ಹುಚ್ಚೆಳ್ಳು ಅಂದಾಕ್ಷಣ ನೆನಪಿಗೆ ಬರೋದು "ಪ್ರಾಯ ಪ್ರಾಯ ಪ್ರಾಯ" ಚಿತ್ರದ "ರಾಗಿ ರೊಟ್ಟಿ ಹುಚ್ಚೆಳ್ ಚಟ್ಣಿ ತಂದಿವ್ನ್ ಮೊಮ್ಮೊಗನೆ"......... ಆ ಹಾಡು ನೆನಪಿಗೆ ಬಂದಾಗ ನನ್ನ ಬಾಯಲ್ಲಿ ಸಹ ಆ ತಿಂಡಿಯನ್ನು ನೆನೆಸಿಕೊಂಡು ನೀರೂರಲಾರಂಭಿಸಿತು. ಉಪ್ಪಿಟ್ಟು, ಚಿತ್ರಾನ್ನ, ಇಡ್ಲಿ, ದೋಸೆ, ಪುಳಿಯೊಗರೆ, ಬಿಸಿ ಬೇಳೆ ಬಾತ್..........ತಿಂಡಿಗಳನ್ನು ತಿಂದು ಜಿಡ್ಡು ಗಟ್ಟಿದ್ದ ನಾಲಿಗೆಗೆ "ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ಣಿ" ತಿನ್ನಬೇಕೆಂದು ಮನಸಾಯಿತು.  ಆಗಲೆ ಮನಸ್ಸು ಬಾಲ್ಯದಲ್ಲಿ ಸೋದರತ್ತೆಯರ ಮನೆಯಲ್ಲಿ ನಮಗಾಗಿ ಪ್ರೀತಿಯಿಂದ ತಯಾರಿಸಿ ಕೊಡುತ್ತಿದ್ದ ಆ ತಿಂಡಿಯನ್ನು ಮೆಲುಕು ಹಾಕುತ್ತಿತ್ತು.
ನಗರದಲ್ಲೇ ಹುಟ್ಟಿ, ಬೆಳೆದು, ಓದಿ ದೊಡ್ಡವರಾಗುತ್ತಿದ್ದ ನಮಗೆ ಬೇಸಿಗೆ ರಜೆ ಅಂದ್ರೆ ಎಲ್ಲಿಲ್ಲದ ಪ್ರೀತಿ. ಪರೀಕ್ಷೆ ಮುಗಿದ ದಿನವೆ ಅಮ್ಮನ ಮೂಲಕ ಶಿಪಾರಸ್ಸು ಮಾಡಿಸಿ ಅಪ್ಪನ ಅನುಮತಿ ಪಡೆದು ಹಳ್ಳಿಯಲ್ಲಿದ್ದ ನಮ್ಮ ತಂದೆಯವರ ಸೋದರಿಯರ ಮನೆಗೆ ನಾನು ನನ್ನಣ್ಣ ಓಡುತ್ತಿದ್ದೆವು. ಪಟ್ಟಣದಿಂದ ಹಳ್ಳಿಗೆ ಬಂದ ಸೋದರಳಿಯರನ್ನು ಕಂಡರೆ ನಮ್ಮ ಅತ್ತೆಯಂದಿರಿಗೆ ಅತಿಯಾದ ಅಕ್ಕರೆ. ತಮ್ಮ ಪ್ರೀತಿಯೊಂದಿಗೆ ಹಳ್ಳಿಯ ಸೊಗಡನ್ನು ಸೇರಿಸಿ ತಯಾರಿಸುತ್ತಿದ್ದ ಆ ತಿಂಡಿಗಳು ಎಷ್ಟೇ ದುಡ್ಡು ಕೊಟ್ಟರೂ ಯಾವ ಹೋಟೆಲಿನಲ್ಲು ಸಿಗಲಾರದಂತವು. ದೊಡ್ಡ ಹಂಡೆಗಳಲ್ಲಿ ಬೇಯಿಸುತ್ತಿದ್ದ ತಟ್ಟೆ ಇಡ್ಲಿ, ಕೆಂಪನೆಯ ಕಾಯಿ ಚಟ್ಣಿ, ಎಳೆ ನುಗ್ಗೆ ಸೊಪ್ಪಿನಿಂದ ತಯಾರಿಸುತ್ತಿದ್ದ ಬಸ್ಸಾರು - ರಾಗಿ ಮುದ್ದೆ, ಕಜ್ಜಾಯ, ಚಕ್ಕುಲಿ, ಅಕ್ಕಿ ರೊಟ್ಟಿ-ಗಟ್ಟಿ ಮೊಸರು - ಉಂಡೆ ಬೆಲ್ಲ ಮತ್ತು ಈ ಲೇಖನ ಬರೆಯಲು ಪ್ರೇರೆಪಿಸಿದ ’ರಾಗಿ ರೊಟ್ಟಿ - ಹುಚ್ಚೆಳ್ಳು ಚಟ್ನಿ".

ಕೆಂಪನೆಯ ರಾಗಿ ಹಿಟ್ಟಿಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ತೆಂಗಿನ ತುರಿ ಹಾಕಿ ಕಲಸಿ, ಬಾಳೆಯ ಎಲೆ ಮೇಲೆ ತೆಳ್ಳಗೆ ತಟ್ಟಿ ಹೆಂಚಿನ ಮೇಲೆ ಹದವಾಗಿ ಬೇಯಿಸಿ ನೇರವಾಗಿ ಒಲೆಯ ಮೇಲಿಂದ ತಟ್ಟೆಗೆ ಬಂದು ಬೀಳುತ್ತಿದ್ದ ಆ ರೊಟ್ಟಿ ಜೊತಗೆ; ಹುಚ್ಚೆಳ್ಳು, ಹುಣಿಸೆ, ಬೆಳ್ಳುಳ್ಳಿ, ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಹಾಕಿ ಕಲ್ಲಿನಲ್ಲಿ ರುಬ್ಬಿದ ಚಟ್ನಿ; ಆಗ ತಾನೆ ಕಡೆದ ಮಜ್ಜಿಗೆಯಿಂದ ತೆಗೆದ ಬಿಳಿಯ ಬೆಣ್ಣೆ ಉಂಡೆ ....ಅಬ್ಬಬ್ಬಾ ತುಂಡು ರೊಟ್ಟಿಯೊಂದಿಗೆ ಬೆಣ್ಣೆ ಚಟ್ಣಿ ಸೇರಿಸಿ ಬಾಯಿಗಿರಿಸಿದರೆ ಸ್ವರ್ಗಕ್ಕೆ ಮೂರೆ ಗೇಣು!!!!
ಬೆಳಗಿನ ಆ ಸವಿ ಸವಿಯಾದ ತಿಂಡಿ ತಿಂದು ಅತ್ತೆ ಮಕ್ಕಳೊಡನೆ ಹೋಗಿ ಅಲ್ಲಿನ ಹಳ್ಳಿಯ ಮಕ್ಕಳೊಡನೆ ಗುಡ್ದ, ತೊರೆ, ತೋಟ, ಗದ್ದೆಯಲ್ಲಿ ಆಡೋದು, ದನ ಕಾಯುವ, ಕುರಿ ಮೇಯಿಸುವ ಮಕ್ಕಳೊಡನೆ ನಾವು ಕುರಿ ಮರಿಗಳನ್ನು ಹಿಡಿದು ಆಡೋದು, ಕೆರೆಯಲ್ಲಿ ಈಜೋದು, ಬೇರೆಯವರ ಮಾವಿನ ತೋಪಿನಲ್ಲಿ ಮಿಡಿ ಮಾವಿನಕಾಯಿ ಕದ್ದು, ಮನೆಯಿಂದ ಹವಣಿಸಿ ತಂದಿದ್ದ ಮೆಣಸಿನಕಾಯಿ ಪುಡಿ, ಉಪ್ಪು ಎಲ್ಲ ಸೇರಿಸಿ ಜಜ್ಜಿ ತಿಂದಿದ್ದು, ಆಲದ ಮರದಿಂದ ತೂಗಿ ಬಿದ್ದಿದ್ದ ತಂತು ಬೇರುಗಳನ್ನು ಹಿಡಿದು ಜೋಕಾಲಿ ಆಡಿದ್ದು................., ಸುಸ್ತಾಗಿ  ಅಲ್ಲೆ ಮರದ ನೆರಳಲ್ಲಿ ಕುರಿಗಳಂತೆ ಮಲಗುತ್ತಿದ್ದುದ್ದು ------ ಒಂದೇ, ಎರಡೆ.
ಇದು ಪ್ರತಿ ನಿತ್ಯದ ದಿನಚರಿಯಾದರೂ ಬೇಸರವೆ ಬರುತ್ತಿರಲಿಲ್ಲ.  ರಜೆ ಮುಗಿದು ಇನ್ನು ಶಾಲೆ ಪ್ರಾರಂಭ ಆಗುತ್ತೆ ಅಂದಾಗ ಅರಿಯದಂತೆ ಮನದಲ್ಲಿ ಏನೋ ಒಂದು ನಿರಾಸೆ ಮೂಡುತ್ತಿತ್ತು. ಮತ್ತೆ ಅದೇ ನಗರ ಜೀವನ, ಶಾಲೆ,  home work, ಅಂತ ಒಲ್ಲದ ಮನಸ್ಸಿನಿಂದ ನಮ್ಮನ್ನು ಕರೆದುಕೊಂಡು ಹೋಗಲು ಬರುತ್ತಿದ್ದ ಅಪ್ಪನ ಮೇಲೆ ಸಿಟ್ಟುಗೊಂಡು, ಅಳುತ್ತಾ ಮನೆಗೆ ವಾಪಸ್ಸಾಗ್ತಾ ಇದ್ದೆವು.
ಓಹ್,  ’ರಾಗಿ ರೊಟ್ಟಿ-ಹುಚ್ಚೆಳ್ಳು ಚಟ್ನಿ’ ಬಗ್ಗೆ ಬರೀಬೇಕು ಅಂದುಕೊಂಡ ಈ ಲೇಖನ "ಬಾಲ್ಯದ ಆಟ ಆ ಹುಡುಗಾಟ ಇನ್ನು ಮಾಸಿಲ್ಲ" ಎನ್ನುವಂತೆ ಬಾಲ್ಯದ ಆ ಸವಿನೆನಪುಗಳನ್ನು ತಂದು ಬಿಡ್ತು.  ಕ್ಷಮಿಸಿ
ಅಂತೂ ಅಂಗಡಿಯಿಂದ ಆ ಹುಚ್ಚೆಳ್ಳು ಪ್ಯಾಕೇಟು ತಂದು ಮನೆಯಲ್ಲಿ, ಮಡದಿಗೆ ಈ ಭಾನುವಾರ ’ರಾಗಿರೊಟ್ಟಿ ಹುಚ್ಚೆಳ್ಳು ಚಟ್ನಿ’ ಮಾಡೋಣ ಎಂದಾಗ, ’ಹುಚ್ಚೆಳ್ಳು ಚಟ್ನಿ’ ಮಾಡೊಕ್ಕೆ ಬರೊದಿಲ್ಲ ಎಂದಳು. ತಕ್ಷಣ ಬೆಂಗಳೂರಿಗೆ ಪೋನಾಯಿಸಿ ಅಮ್ಮನಿಂದ ’ಹುಚ್ಚೆಳ್ಳು ಚಟ್ನಿ’ ತಯಾರಿಕೆಯ ವಿಧಾನ ತಿಳಿದುಕೊಂಡು, ಭಾನುವಾರಕ್ಕಾಗಿ ಕಾಯುತ್ತಿದ್ದೆ. ಭಾನುವಾರ ಬೆಳಿಗ್ಗೆ ಎದ್ದು ಮೊದಲು ಮಾಡಿದ್ದು ಈ  ’ರಾಗಿ ರೊಟ್ಟಿ-ಹುಚ್ಚೆಳ್ಳು ಚಟ್ನಿ’. ಆ ಕಾಲದ ಹಾಗೆ, ಈಗೆಲ್ಲಿ ಸಿಗುತ್ತೆ "ಆಗ ತಾನೆ ಮಜ್ಜಿಗೆ ಕಡೆದು ತೆಗೆದ ಹಸನಾದ ಹೊಸ ಬೆಣ್ಣೆ". ಅಮೂಲ್ ಕಂಪನಿಯವರ ಬೆಣ್ಣೆಯನ್ನು ಆ ಬೆಣ್ಣೆ ಅಂತ ಅಂದುಕೊಂಡು ಅಂತೂ ಇಂತೂ ಬಹಳ ವರ್ಷದ ನಂತರ ನನ್ನ ನೆಚ್ಚಿನ ತಿಂಡಿಯನ್ನು ಮಾಡಿ ತಿಂದೆವು.
                           "ರಾಗಿ ರೊಟ್ಟಿ-ಹುಚ್ಚೆಳ್ಳು ಚಟ್ನಿ ತಂದಿವ್ನಿ ಮೊಮ್ಮೊಗನೆ
                            ಮೂಗಿನ ಮಟ್ಟ ಜಡಿದು ನೀನು ಮಲಗೊ ಕಳ್ ನನ್ಮಗನೆ"
-ಸತೀ

Thursday, December 16, 2010

ಭ್ರಮೆ

ಭ್ರಮೆ

ಸ್ವಪ್ನಗಳಿಗೂ ಮರೀಚಿಕೆಗೂ ಎಂಥಹಾ ಹೋಲಿಕೆ;
ನಿಜ ಜೀವನದಿ ಅನುಭವಿಸಲಾರದ ಆಸೆಗಳನು
ಸುಪ್ತಾವಸ್ಥೆಯಲಾದರು ಈಡೇರಿಸುವವು ಈ ಸುಂದರ ಸ್ವಪ್ನಗಳು,
ಸುಡುವ ಡಾಂಬರು ರಸ್ತೆಯಲಿ ಮನ ತಂಪನು ಬಯಸುವಾಗ
ದೂರದಲಿ ತಣ್ಣೀರಿನ ಚಿಲುಮೆಯಂತೆ ಕಾಣುವುದು ಮರೀಚಿಕೆಗಳು,
 ಆಸೆಗಳು ಈಡೇರಿದವು ಎಂದು ಕಣ್ತೆರೆದರೆ ಕನಸು ಮಾಯ
ನೀರಿನ ಚಿಲುಮೆ ಸಿಕ್ಕಿತಲ್ಲಾ ಎಂದು ಸಮೀಪಿಸಿದರೆ ಮರೀಚಿಕೆ ಮಾಯ
ಒಂದು ಕಣ್ಮುಚ್ಚಿದ್ದಾಗ ಕಾಣುವ ಭ್ರಮೆಯಾದರೆ
ಇನ್ನೊಂದು ಕಣ್ಣೆದುರಿಗೆ ಕಾಣುವ ಭ್ರಮೆ
ಒಟ್ಟಾರೆ ಇವೆರಡು ಭ್ರಮೆಗಳಾದರೂ
ಕೆಲಕಾಲಕಾದರು ಮನಕೆ ಖುಶಿಕೊಡುವ ತಂಬೆಲರು!
-ಸತೀ
 

ಬೇವು ಬೆಲ್ಲ

ಬೇವು ಬೆಲ್ಲ

ನನ್ನವಳು ನನ್ನಯ ಪಾಲಿನ ಬೇವೂ ಬೆಲ್ಲ
ಸರಸದ ಸಮಯದಲಿ ಅವಳ ಪ್ರೀತಿ ಬೆಲ್ಲದಷ್ಟೇ ಸಿಹಿ
ವಿರಸದ ಸಮಯದಲಿ ಅವಳ ಕೋಪ ಬೇವಿನಷ್ಟೆ ಕಹಿ
ಬರೀ ಸರಸವೇ ಆದರೆ ಅಂಟಿಕೊಳ್ಳುವುದು ಸಕ್ಕರೆ ಕಾಯಿಲೆ
ಕಾಯಿಲೆ ಓಡಿಸಲು ಆಗಾಗ ಕೊಡುವಳು ಔಷದಿಯುಳ್ಳ ಬೇವಿನೆಲೆ
ಒಟ್ಟಾರೆ ಕಾಯಿಲೆ ಬರಿಸುವವಳು ಅವಳೇ
ಬಂದ ಕಾಯಿಲೆ ಗುಣಪಡಿಸುವ ಶುಶ್ರೂಷಕಿಯೂ ಅವಳೇ
ಇಂತಹ ಶ್ರೇಷ್ಠ ಗುಣಹೊಂದಿರುವವಳು ಮಡದಿಯೊಬ್ಬಳೆ
ಅದಕ್ಕೆ ಅವಳನ್ನು ಪ್ರೀತಿಯಿಂದ ಕರೆಯುವೆ "ಹೇ ನನ್ನವಳೇ"
-ಸತೀ

Sunday, November 7, 2010

"ಆಲಯ...ಸಂಗ್ರಹಾಲಯ..... ಪಳಪಳ ಹೊಳೆಯುವ ಗಾಜಿನ ಸಂಗ್ರಹಾಲಯ"

"ಆಲಯ...ಸಂಗ್ರಹಾಲಯ..... ಪಳಪಳ ಹೊಳೆಯುವ ಗಾಜಿನ ಸಂಗ್ರಹಾಲಯ"


ಪ್ರಾಣಿ ಸಂಗ್ರಹಾಲಯ, ಪ್ರಾಚೀನ ವಸ್ತು ಸಂಗ್ರಹಾಲಯ, ಇತಿಹಾಸ ಸಂಗ್ರಹಾಲಯ, ಖಗೋಳ ಶಾಸ್ತ್ರಕ್ಕೆ ಸಂಭಂದಿಸಿದ ಸಂಗ್ರಹಾಲಯ........ಮುಂತಾದ ಅನೇಕ ಸಂಗ್ರಹಾಲಯಗಳು ಎಲ್ಲಾ ಕಡೆ ಇರುವುದು ಸರ್ವೇ ಸಾಮಾನ್ಯ. ಆದರೆ ಪ್ರತ್ಯೇಕವಾಗಿ ಗಾಜಿನ ವಸ್ತುಗಳಿಗೆ ಮೀಸಲಾಗಿರುವ ಸಂಗ್ರಹಾಲಯವನ್ನು ನೋಡಬೇಕೆನಿಸಿದರೆ ಸಿಗುವುದು ಕೆಲವು ಮಾತ್ರ. ಅಂತಹದೇ ಒಂದು ಸಂಗ್ರಹಾಲಯ ಅಮೇರಿಕದ ನ್ಯೂಯಾರ್ಕ್ ನಲ್ಲಿ ಇರುವ "ಕಾರ್ನಿಂಗ್ ಗ್ಲಾಸ್ ಮ್ಯೂಸಿಯಂ". ನ್ಯೂಯಾರ್ಕ್ ರಾಜ್ಯದ, ಫಿಂಗರ್ ಲೇಕ್ ಪ್ರಾಂತ್ಯದ, ಕಾರ್ನಿಂಗ್ ಪಟ್ಟಣದಲ್ಲಿ ಈ ಸಂಗ್ರಹಾಲಯ ತಲೆ ಎತ್ತಿ ನಿಂದಿದೆ. ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗಿನ, ಜಗತ್ತಿನ ಎಲ್ಲ ದೇಶಗಳಲ್ಲಿ ತಯಾರಾಗಿರುವ ಸುಮಾರು ೪೫,೦೦೦ ಕ್ಕೂ ಹೆಚ್ಚು ಗಾಜಿನ ವಸ್ತುಗಳನ್ನು/ ಮಾದರಿಗಳನ್ನು ಒಂದೇ ಸೂರಿನಡಿ ಸಂಗ್ರಹಿಸಿಟ್ಟಿರುವುದು ಇಲ್ಲಿನ ಒಂದು ವಿಶೇಷ. 
          ಆರಂಭದಲ್ಲಿ "ರಾಕೊ (Rakow) ಸಂಶೋಧನ ಗ್ರಂಥಾಲಯ" ಎಂಬ ಹೆಸರಿನಿಂದ ಸ್ಥಾಪಿಸಲಾದ ಇದರ ಮೂಲ ಉದ್ದೇಶ ಗಾಜಿನ ಇತಿಹಾಸ ಹಾಗು ಅದನ್ನು ತಯಾರಿಸುವ ಕಲೆಯ ಬಗ್ಗೆ ಜಗತ್ತಿನಾದ್ಯಂತ ಇರುವ ಪುಸ್ತಕಗಳನ್ನು ಒಟ್ಟುಗೂಡಿಸಿ ಗ್ರಂಥಾಲಯ ತೆರೆಯುವುದಾಗಿತ್ತು. ಈ ಗ್ರಂಥಾಲಯದಲ್ಲಿ ಸುಮಾರು ೪೦ಕ್ಕೂ ಹೆಚ್ಚು ಭಾಷೆಯ, ೪೦,೦೦೦ ಸಾವಿರಕ್ಕು ಅಧಿಕ ಪುಸ್ತಕಗಳ ಸಂಗ್ರಹವಿದೆ. ಜೊತೆಗೆ ಗಾಜನ್ನು ತಯಾರಿಸುವ ತರಬೇತಿಯನ್ನು ಸಹ ಶಿಕ್ಷಣ ರೂಪದಲ್ಲಿ ಕೊಡಲಾಗುತ್ತದೆ. ವಿಧ್ಯಾರ್ಥಿಗಳಿಗೆ ಬೇಕಾದ ವಿಧ್ಯಾರ್ಥಿ ವೇತನ ಮತ್ತು ಇತರ ರೂಪದ ಆರ್ಥಿಕ ಸಹಾಯವನ್ನು ಸಹ ಸಾವಿರಾರು ವಿಧ್ಯಾರ್ಥಿಗಳಿಗೆ ನೀಡುತ್ತಾ ಬಂದಿದೆ ಈ ಸಂಸ್ಥೆ.
ಕೇವಲ ಗಾಜು ತಯಾರಿಸುವ ಶಿಕ್ಷಣ ಕೊಡುವುದು ಹಾಗು ಗಾಜಿನ ಬಗ್ಗೆ ಸಂಭಂದಿಸಿದ ಪುಸ್ತಕಗಳನ್ನು ಸಂಗ್ರಹಿಸಿಡಲು ಹಾಗು ಗಾಜು ತಯಾರಿಸುವ "ಲಾಭಗಳಿಸದ ಸಂಸ್ಥೆ" ಯಾಗಿದ್ದ ಈ ಸಂಸ್ಥೆಯನ್ನು, ೧೯೫೧ರಲ್ಲಿ ಸಾರ್ವಜನಿಕರು ವೀಕ್ಷಿಸುವ, ಸಂಗ್ರಹಾಲಯವನ್ನಾಗಿಯೂ ಬದಲಾಯಿಸಲಾಯಿತು.
೧೯೭೨ರಲ್ಲಿ ಸತತವಾಗಿ ಒಂದು ವಾರದ ಕಾಲ ಬೀಸಿದ ಬಿರುಗಾಳಿ, ಚಂಡಮಾರುತ ಹಾಗು ಜೋರಾದ ಮಳೆಗೆ ಪಕ್ಕದಲ್ಲೆ ಹರಿಯುತ್ತಿದ ಚೇಮಂಗ್ ನದಿಯಲ್ಲಿ ಪ್ರವಾಹ ಉಕ್ಕಿ ಈ ಸಂಗ್ರಹಾಲಯ ಪೂರ್ತಿ ಜಲಾವೃತವಾಗಿ ಅಪಾರ ಪ್ರಮಾಣದ ನಷ್ಟ ಅನುಭವಿಸಿತು. ನಂತರ ಕಾರ್ಖಾನೆಯ ನಿರ್ದೇಶಕರು ಹಾಗು ಕಾರ್ಮಿಕರ ಸತತ ಪರಿಶ್ರಮದ ನೆರವಿನಿಂದ ಅದರ ಜೀರ್ಣೋದ್ದಾರ ಕಾರ್ಯ ಆರಂಭವಾಗಿ ಹಾಗೂ ೧೯೭೮ರಿಂದ ಹಳೆಯ ಕಟ್ಟಡಗಳ ದುರಸ್ತೀಕರಣ ಪ್ರಾರಂಭವಾಗಿ ೧೯೯೦ರ ದಶಕದ ಆರಂಭದಲ್ಲಿ ಈಗಿನ ನವೀನ ರೂಪವನ್ನು ಮೈತಳೆದು ನಿಂದಿದೆ.
ಸುಮಾರು ೧೮,೦೦೦ ಚದುರ ಅಡಿಗಳ ವಿಸ್ತೀರ್ಣವುಳ್ಳ, ಸಾಧ್ಯವಾದಷ್ಟು ಗಾಜಿನಿಂದಲೇ ನಿರ್ಮಿಸಲಾಗಿರುವ ಈ ಸಂಗ್ರಹಾಲಯವನ್ನು ವೀಕ್ಷಿಸಲು ಜಗತ್ತಿನ ಎಲ್ಲ ಕಡೆಯಿಂದ ವರ್ಷಕ್ಕೆ ಸುಮಾರು ೩ ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ.
ಹಾಟ್ ಗ್ಲಾಸ್ ಶೋ
          ಈ ಸಂಗ್ರಹಾಲಯದ ಪ್ರಮುಖ ಆಕರ್ಷಣೆ, ನಮ್ಮ ಕಣ್ಣೆದುರಿಗೆ ತೋರಿಸುವ " ಹಾಟ್ ಗ್ಲಾಸ್ ಶೋ". ಸಂಗ್ರಹಾಲಯದ ಮುಖ್ಯದ್ವಾರವನ್ನು ಪ್ರವೇಶಿಸಿ, ಹಜಾರವನ್ನು ತಲುಪಿದಾಗ, ದೊಡ್ಡ ದೊಡ್ಡ ಡ್ರಾಯಿಂಗ್ ಹಾಳೆಗಳು ಹಾಗು ಬರೆಯುವ ಸಾಮಾಗ್ರಿಗಳು ನಿಮ್ಮನ್ನು ಸ್ವಾಗತಿಸುತ್ತವೆ. ನಿಮ್ಮ ಕಲ್ಪನೆಯ ಆಧುನಿಕ ವಿನ್ಯಾಸದ ಚಿತ್ರಗಳನ್ನು ಬಿಡಿಸಿ, ಅದಕ್ಕೆ ಬಣ್ಣ ತುಂಬಿ, ನಿಮ್ಮ ಹೆಸರು ಹಾಗು ವಿಳಾಸ ಬರೆದು ಅಲ್ಲಿ ಇರಿಸಿದರೆ, ಅವುಗಳಲ್ಲಿ ಒಂದನ್ನು ಆಯ್ದು ಆ ದಿನದ " ಹಾಟ್ ಗ್ಲಾಸ್ ಶೋ" ನಲ್ಲಿ ನೀವು ಬರೆದ ಆ ಚಿತ್ರದ ಮಾದರಿಯನ್ನು ನುರಿತ ಕಾರ್ಮಿಕರು ನಿಮ್ಮ ಕಣ್ಣು ಮುಂದೆಯೇ ತಯಾರಿಸಿ ಬಣ್ಣ ತುಂಬಿ ತೋರಿಸುತ್ತಾರೆ. ಸುಮಾರು ೩೦ ರಿಂದ ೪೫ ನಿಮಿಷಗಳ ಅವಧಿಯ ಈ ಪ್ರದರ್ಶನದಲ್ಲಿ ಕಾರ್ಮಿಕರ ಕೈಚಳಕದಿಂದ, ಸಿಲಿಕಾನ್ ಡೈ ಆಕ್ಸೈಡ್, ಸೋಡಿಯಂ ಕಾರ್ಬೊನೇಟ್ ಹಾಗು ಕ್ಯಾಲ್ಸಿಯಂ ಕಾರ್ಬೊನೇಟ್ ರಾಸಾಯನಿಕಗಳು ಹದವಾಗಿ ಬೆರೆತು, ವಿವಿಧ ಉಷ್ಣತೆಯಲ್ಲಿ ಕರಗಿ, ಬೆಂದು, ಬೇಕಾದ ಆಕಾರ ತಳೆದು, ಬಣ್ಣ ಹಚ್ಚಿಕೊಂಡು ಆಯ್ದ ಕಲಾಕೃತಿಗಳು ತಯಾರಾಗುವುದನ್ನು ನೋಡುವುದೇ ಒಂದು ಸೊಬಗು.
ಅಮೆರಿಕನ್ ಬ್ರೈಡಲ್ ಅಟ್ಟೈರ್
ಗಾಜಿನ ಸಂಗ್ರಹಾಲಯದಲ್ಲಿ ಪ್ರಾಚೀನ ಹಾಗು ಆದುನಿಕ ವಿನ್ಯಾಸದ ಸಾವಿರಾರು ಮಾದರಿಯ ಗಾಜಿನ ವಸ್ತುಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಅದರಲ್ಲಿ ಪ್ರಮುಖವಾದ ಆಕರ್ಷಕ ಮಾದರಿ ಎಂದರೆ "ಅಮೆರಿಕನ್ ಬ್ರೈಡಲ್ ಅಟ್ಟೈರ್". ಅಮೆರಿಕದ ಮದುವಣಗಿತ್ತಿಯು ಧರಿಸುವ ಬಿಳಿವಸ್ತ್ರದ ಮಾದರಿಯನ್ನು ಪಾರದರ್ಶಕೀಯವಾಗಿ, ಬಿಳಿಯ ಗಾಜಿನಲ್ಲಿ ತಯಾರಿಸಿ ಇರಿಸಲಾಗಿರುವ ಆ ಅಪರೂಪದ ಕಲಾಕೃತಿ,  ಬಿಳಿಯ ರೇಶಿಮೆ ನೂಲಿನಿಂದ ನೇಯ್ದು ಸಾಕ್ಷಾತ್ ಮಧುಮಗಳಿಗೆ ಉಡಿಸಿರುವ ರೀತಿ ಕಾಣಿಸುತ್ತದೆ.  ಅದನ್ನು ನಿರ್ಮಿಸಿರುವ ಆ ಕುಶಲ ಕಾರ್ಮಿಕರ ಕೈ ಚಳಕ ನಿಜಕ್ಕೂ ಶ್ಲಾಘನೀಯ!
ಇನ್ನು ಅನೇಕ ರೀತಿಯ ಗಾಜಿನ ಮಾದರಿಗಳು, ಹಣ್ಣುಗಳು, ಹೂವುಗಳು, ಗಾಜಿನ ಆಭರಣಗಳು, ವಿವಿಧ ರೀತಿಯ ಬಾಟಲಿಗಳು, ಅಲಂಕಾರಿಕ ತೂಗುದೀಪಗಳನ್ನು ಎಷ್ಟು ನೋಡಿದರು ನೋಡುತ್ತಲೆ ಇರಬೇಕು ಎನಿಸುತ್ತವೆ. ಪ್ರತೀ ವಸ್ತುಗಳನ್ನು ಇರಿಸಿರುವ ರೀತಿ, ಆ ವಸ್ತುಗಳು ಇನ್ನು ಅಕರ್ಶಕವಾಗಿ ಕಾಣುವಂತೆ ಮಾಡಲು ಅವುಗಳ ಮೇಲೆ ಚೆಲ್ಲುವ  ವಿವಿಧ ಬಣ್ಣದ ವಿದ್ಯುತ್ ದೀಪಗಳು ಆ ಕಲಾಕೃತಿಗಳ ಮೆರಗನ್ನು ಇನ್ನು ಹೆಚ್ಚಿಸುತ್ತವೆ.

ಕೇವಲ ನೋಡುಗರ ಕಣ್ಣುಗಳನ್ನು ತಣಿಸುವುದಷ್ಟೇ ಮೂಲ ಉದ್ದೇಶವಲ್ಲದ ಈ ಸಂಗ್ರಹಾಲಯದಲ್ಲಿ, ಗಾಜಿನ ಭೌತಿಕ ಹಾಗು ರಾಸಾಯನಿಕ ಗುಣಧರ್ಮಗಳನ್ನು ವಿವರಿಸುವ ಫಲಕಗಳು, ಅಲ್ಲಲ್ಲೇ ಅವುಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಮಾರ್ಗದರ್ಶಿಗಳು, ೫-೧೦ ನಿಮಿಷಗಳ ಅವಧಿಯ ವಿಡಿಯೋ ಚಿತ್ರಗಳು, ಗಾಜಿನ ಗುಣಧರ್ಮಗಳನ್ನು ವಿವರಿಸುವ ಮಾದರಿಗಳು ಎಲ್ಲವೂ ಅತೀ ಕ್ರಮಬದ್ದವಾಗಿ ಇರಿಸಲಾಗಿದೆ. ಒಟ್ಟಾರೆ, ಗಾಜಿನ ಬಗ್ಗೆ ಮಾಹಿತಿ ಬಯಸಿ ಬರುವ ಎಲ್ಲಾ ವಿಧ್ಯಾರ್ಥಿಗಳಿಗೆ, ಸಂಶೋಧಕರಿಗೆ, ಸಾರ್ವಜನಿಕರಿಗೆ, ಒಟ್ಟಾರೆ ಎಲ್ಲರಿಗೂ ಬೇಕಾದ ವಿಷಯಗಳು ಸುಲಭವಾಗಿ ಇಲ್ಲಿ ಲಭ್ಯವಾಗುತ್ತದೆ.
ಎಲ್ಲವನ್ನು ನೋಡಿದ ಬಳಿಕ, ಕೆಳಗಿನ ಅಂತಸ್ತಿನಲ್ಲಿರುವ ಮಾರಾಟದ ಮಳಿಗೆಯಲ್ಲಿ ಸ್ವಲ್ಪ ಅಗ್ಗದ ಬೆಲೆಯಲ್ಲಿ, ಗಾಜಿನ ವಸ್ತುಗಳನ್ನು ನೆನಪಿನ ಕಾಣಿಕೆಯಾಗಿ ಖರೀದಿಸಬಹುದು.
ಸಂಪೂರ್ಣವಾಗಿ ಈ ಸಂಗ್ರಹಾಲಯವನ್ನು ವೀಕ್ಷಿಸಲು ಸುಮಾರು ೪ ಘಂಟೆಗಳ ಅವಧಿ ಬೇಕಾಗಬಹುದು. ಅಂತರ್ಜಾಲದ ಮೂಲಕ ಮುಂಗಡವಾಗಿಯೇ ಟಿಕೇಟನ್ನು ಕಾದಿರಿಸಲುಬಹುದು. ಪ್ರತಿ ದಿನ ಬೆಳಿಗ್ಗೆ ೯ ರಿಂದ ಸಂಜೆ ೬ರ ವರೆಗೆ ಸಂಗ್ರಹಾಲಯ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುವುದು. ೧೯ ವರ್ಷದ ಕೆಳಗಿನ ಎಲ್ಲರಿಗೂ ಉಚಿತ ಪ್ರವೇಶ. ಉಳಿದವರಿಗೆ ಪ್ರವೇಶ ದರ ೧೪ ಡಾಲರುಗಳು.
ಸತೀ
 
 

Thursday, October 28, 2010

"ದೇವರು ಕೊಟ್ಟ ತಂಗಿ"

"ದೇವರು ಕೊಟ್ಟ ತಂಗಿ"
ನಾನು ಬರೆಯಬೇಕೆಂದಿರುವ ಈ ಲೇಖನ ನನ್ನ ಜೀವನದಲ್ಲಿ ಬಹಳ ವರ್ಷಗಳ ಹಿಂದೆ ನಡೆದ ಒಂದು ಸುಮಧುರವಾದ ಘಟನೆ. ಅದನ್ನ ಈಗ ನಿಮ್ಮೆಲ್ಲರೊಡನೆ ಹಂಚಿಕೊಳ್ಳಬೇಕೆಂಬ ಮನಸ್ಸಾಗ್ತಾ ಇದೆ. ಹೇಗೆ ಆರಂಭಿಸಲಿ ಅಂತ ಗೊತ್ತಾಗ್ತಾ ಇಲ್ಲ. ಹೂ...ಹೀಗೆ.....
          ನಾವು ನಮ್ಮ ತಂದೆ-ತಾಯಿಗೆ ನಾಲ್ಕು ಜನ ಗಂಡು ಮಕ್ಕಳು. ಆದರೆ ಹೆಣ್ಣು ಮಕ್ಕಳಿಲ್ಲವೆಂಬ ಕೊರಗು ನಮ್ಮೆಲ್ಲರ ಮನಸ್ಸನ್ನು ಯಾವಾಗಲು ಕೊರೆಯುತ್ತಿತ್ತು. ನನಗೋ ಚಿಕ್ಕಂದಿನಿಂದ ಒಬ್ಬ ಪುಟ್ಟ ತಂಗಿ ಬೇಕೆಂದು  ಮನದಲ್ಲಿ ಸದಾ ಅನಿಸುತ್ತಿತ್ತು. ಹಾದಿಯಲ್ಲಿ ಹೋಗುವಾಗ, ಒಟ್ಟಾಗಿ ಆಡುವ ಪುಟ್ಟ ಅಣ್ಣ-ತಂಗಿಯರನ್ನು ನೋಡಿದಾಗ, ನನ್ನ ಗೆಳೆಯರ ಮನೆಗೆ ಹೋದಾಗ ಅವರು ತಮ್ಮ/ತಂಗಿಯರೊಡನೆ ಆಡುವ ಪ್ರೀತಿಯ ಜಗಳ ಕಂಡಾಗ, ರಕ್ಷಾಬಂಧನದಂದು ತಂಗಿ ಅಣ್ಣನ ಒಳಿತನ್ನು ಬಯಸಿ ರಾಖೀ ಕಟ್ಟುವಾಗ, ನಾಗರ ಪಂಚಮಿಯಂದು ಅಣ್ಣ-ತಂಗಿಯರು ಒಟ್ಟಾಗಿ ತನಿಯೆರೆಯುವಾಗ ನನ್ನ ಮನ ಮೂಕವೇದನೆ ಅನುಭವಿಸುತ್ತಿತ್ತು. ಯಾವಾಗಲು ನಾನು ದೇವರನ್ನು ಶಪಿಸುತ್ತಿದ್ದೆ, ಏಕೆ ನನಗೆ ಒಬ್ಬ ತಂಗಿಯನ್ನು ಕೊಡಲಿಲ್ಲ ಅಂತ.
          ನನ್ನ ಪದವಿ-ಪೂರ್ವ ವಿಧ್ಯಾಭ್ಯಾಸ ಮುಗಿಸಿ ಮುಂದೆ ಪದವೀಧರನಾಗುವ ಆಕಾಂಕ್ಷೆ ಹೊತ್ತು, ವಿಶ್ವ-ವಿದ್ಯಾಲಯದಲ್ಲಿ ಪ್ರವೇಶ ಪಡೆದೆ. ಶಾಲಾ-ಕಾಲೇಜಿನಲ್ಲಿ ಆಗದ ಅನುಭವಗಳು ವಿಶ್ವ-ವಿದ್ಯಾನಿಲಯದಲ್ಲಿ ಆಗಲಾರಂಭಿಸಿದವು. ನನ್ನ ಮೊದಲನೇ ವರ್ಷದ ಪದವಿ ಪರೀಕ್ಷೆ ಮುಗಿಸುವಷ್ಟರಲ್ಲಿ ಕೇವಲ ೪-೫ ಜನ ಆತ್ಮೀಯ ಗೆಳೆಯ/ಗೆಳತಿಯರ ಗುಂಪೊಂದು ಕಟ್ಟಿಕೊಡಿದ್ದೆ. ಅವರು ಇಂದಿಗೂ ನನ್ನ ಆಪ್ತ-ಸ್ನೇಹಿತರಾಗೆ ಇದ್ದಾರೆ. ಆ ನಾಲ್ಕು ಜನರಿಗು ಸೋದರಿ/ಸೋದರರಿದ್ದರು. ನಾನೊಬ್ಬ ಈ ವಿಷಯದಲ್ಲಿ ಗುಂಪಿಗೆ ಸೇರದ ವ್ಯಕ್ತಿಯಾಗಿದ್ದೆ.
ನನ್ನ ಎರಡನೇ ವರ್ಷದ ಪದವಿಯ ಮೊದಲ ದಿನಗಳಲ್ಲಿ ಒಂದು ದಿನ ಬೆಳಿಗ್ಗೆ (ಬಹುಶಃ 9/11/1989 ಅನ್ನಿಸುತ್ತೆ!!) ನಮ್ಮ ಗುಂಪಿನ ಒಬ್ಬ ಸ್ನೇಹಿತ ನನ್ನ ಹತ್ತಿರ ಬಂದು ಈ ಸಂಜೆ ಒಂದು ವಿಶೇಷ ಕಾದಿದೆ, ಸರಿಯಾಗಿ ೫.೩೦ಕ್ಕೆ ಒಂದು ಹೋಟೆಲಿನ ಹತ್ತಿರ ಬಾ ಅಂತ ಹೇಳಿದ. ನನಗೆ ಬೆಳಗಿನಿಂದಲೂ ಏನೋ ಆತುರ, ಕಾತರ. ಏನಿರಬಹುದು ಆ ವಿಶೇಷ ಅಂತ ತಲೆಯಲ್ಲಿ ನೂರೆಂಟು ಲೆಕ್ಕಾಚಾರ ಹಾಕಿದೆ. ಇಡೀ ದಿನ ತರಗತಿಗಳಲ್ಲಿ ಪಾಠ ಸಹ ಸರಿಯಾಗಿ ಕೇಳಲಾಗಲಿಲ್ಲ. ಅಂತೂ ಸಂಜೆ ೫.೩೦ ಆಗುವವರೆಗೂ ಹೇಗೋ ಆ ದಿನದೂಡಿ ಅವನು ಹೇಳಿದ್ದ ಹೋಟೆಲನ್ನು ತಲುಪಿದೆ.
          ಕೆಲವು ಕ್ಷಣಗಳ ಬಳಿಕ ನನ್ನ ಸ್ನೇಹಿತ ಒಂದು ಯುವತಿಯೊಡನೆ ನಾನು ಕುಳಿತಿದ್ದ ಟೇಬಲ್ ಬಳಿ ಬಂದು ಜೊತೆಯಲ್ಲಿದ್ದ ಯುವತಿಯನ್ನು ಪರಿಚಯಿಸಿ, ಈಕೆ ನನ್ನ "ಗೆಳತಿ" ಎಂದು ಹೇಳಿದ. ನಾನು ಆ ದಿನಗಳಲ್ಲಿ ಸ್ವಲ್ಪ ನಾಚಿಕೆ ಸ್ವಭಾವಿ ಹಾಗು ಮಿತಭಾಷಿಯಾಗಿದ್ದೆ. ಹೊಸಬರೊಡನೆ ಮಾತನಾಡಲು ಬಹಳ ಸಂಕೋಚವಾಗುತ್ತಿತ್ತು (ಈಗ ಹಾಗಿಲ್ಲ!!). ಆದರೂ ಅದೇನೋ, ಮೊದಲನೆ ನೋಟದಲ್ಲೆ ಆಕೆ ನನಗೆ ಬಹಳ ಪರಿಚಿತಳು ಅನ್ನಿಸುತ್ತಿತ್ತು. ಆತ್ಮೀಯತೆಯಿಂದ "ಹಲೋ" ಎಂದೆ. ಮೊದಲನೇ ಭೇಟಿಯಲ್ಲೆ ಆಕೆ ನನ್ನೊಡನೆ ಬಹಳ ಅಕ್ಕರೆಯಿಂದ ಮನಬಿಚ್ಚಿ ಮಾತನಾಡಿದಳು.
            ಹೀಗೆ ಯಾವಾಗಲಾದರೊಮ್ಮೆ ಆಗಾಗ್ಗೆ ನನ್ನ ಸ್ನೇಹಿತನೊಡನೆ ಅವಳ ಭೇಟಿ ಆಗುತ್ತಿತ್ತು. ಇಂತಹ ಕೆಲವು ಭೇಟಿಗಳಲ್ಲಿಯೇ ನಮ್ಮಲ್ಲಿ ಒಂದು ರೀತಿಯ ಅನುಬಂಧ ಬೆಳೆಯಲಾರಂಭಿಸಿತು. ಈ ನಡುವೆ, ನಾನು ಅವಳನ್ನು ನನ್ನ ತಂದೆ-ತಾಯಿ, ಅಣ್ಣ - ತಮ್ಮಂದಿರಿಗೆ ಪರಿಚಯಿಸಿದೆ. ಮೊದಲನೇ ಪರಿಚಯದಲ್ಲೆ ಅವಳು ನಮ್ಮ ತಂದೆ ತಾಯಿಯರನ್ನು "ಅಪ್ಪಾಜಿ - ಅಮ್ಮ" ಎಂದು ಕೂಗಿ ಕರೆದಾಗ ಅವರಿಗೂ ಬಹಳ ಆನಂದವಾಯಿತು. ಕೆಲ ಸಮಯದಲ್ಲಿಯೇ ಅವಳು ನಮ್ಮ ಮನೆಯ ಮಗಳಂತಾದಳು. ಮೆಲ್ಲನೆ ನನ್ನ ಮನದಲ್ಲಿ ತಂಗಿ ಇಲ್ಲವೆಂಬ ಭಾವನೆ ಓಡಿಹೋಗಿ, ಚಿಕ್ಕಂದಿನಿಂದಲೇ ನನಗೆ ಒಡಹುಟ್ಟಿದವಳಿದ್ದಾಳೆ ಎಂಬ ಭಾವನೆ ಬೆಳೆಯಲಾರಂಭಿಸಿತು. ಆ ನನ್ನ ತಂಗಿ ದಿನಾಂಕಗಳನ್ನು ನೆನಪಿತ್ತುಕೊಳ್ಳುವುದರಲ್ಲಿ ಅತೀ ನಿಪುಣೆಯಾಗಿದ್ದಳು. ನಮಗೆ ಪರೀಕ್ಷೆಗಳಿರುವ ದಿನ, ಜನ್ಮದಿನ, ರಾಖಿ ಹಬ್ಬದ ದಿನ ಮರೆಯದೆ ಶುಭಾಶಯ ಪತ್ರಗಳನ್ನು ಕಳಿಸುತ್ತಿದ್ದಳು. ಆ ವರ್ಷದ "ರಕ್ಷಾ ಬಂಧನ" ದಿನದಂದು ನನ್ನ ಕೈಗೆ ರಾಖೀ ಕಟ್ಟಿ ನಮ್ಮಿಬ್ಬರ ಅಣ್ಣ-ತಂಗಿಯರ ಸಂಬಂಧವನ್ನು ಇನ್ನೂ ಗಟ್ಟಿಗೊಳಿಸಿದ್ದಳು.
ಸುಖ-ದುಖಃಗಳು ಬಾಳಿನ ಎರಡು ಮುಖಗಳಿದ್ದಂತೆ. ಆಗಾಗ್ಗೆ ಕೆಲವು ದುಖಃಕರ ವಿಷಯಗಳು ಜೀವನದಲ್ಲಿ ನಮ್ಮ ಮನಸ್ಸನ್ನು ಗಟ್ಟಿಗೊಳಿಸುತ್ತವೆ. ತಂಗಿ ಸಿಕ್ಕಳು ಎಂದು ಸಂತೋಷಪಡುತ್ತಿದ್ದ ಕೆಲವೇ ತಿಂಗಳುಗಳಲ್ಲಿ ಒಂದು ದಿನ ನನ್ನ ಸ್ನೇಹಿತನ ಬಾಡಿದ ಮುಖ ಕಂಡು ನನಗೆ ಬಹಳ ಆತಂಕವಾಯಿತು.  ಅವನು ಹೇಳಿದ ಆ ವಿಷಯ ನನ್ನ ಮುಖವನ್ನು ಇನ್ನೂ ಕಳೆಗುಂದುವಂತೆ ಮಾಡಿತು. ನನ್ನ ಆ ತಂಗಿಯ ತಂದೆ ಸರ್ಕಾರಿ ಇಂಜೀನಿಯರ್. ಅವರಿಗೆ ಬಹಳ ವರ್ಷಗಳ ನಂತರ ದೂರದ ಊರಿಗೆ ವರ್ಗಾವಣೆಯಾಗಿತ್ತು. ಅವರು ಅದನ್ನು ತಪ್ಪಿಸಿಕೊಳ್ಳಲಾಗದೆ ತಮ್ಮ ಸಂಸಾರ ಸಮೇತ ಆ ಊರಿಗೆ ಹೋಗಲು ನಿರ್ಧರಿಸಿದ್ದರು. ನನ್ನ ಹಾಗು ನನ್ನ ಸ್ನೇಹಿತನ ಮನಸ್ಥಿತಿ ಒಂದೇ ಆಗಿತ್ತು. ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ "ಗೆಳತಿ"ಯಿಂದ ದೂರ ಇರಬೇಕಲ್ಲ ಅಂತ ಅವನ ವ್ಯಥೆಯಾದರೆ, ಕೇವಲ ಒಂದೇ ವರ್ಷದಲ್ಲಿ ತನ್ನ ಒಡಹುಟ್ಟಿದವರಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುವ ಆ "ತಂಗಿ" ಯಿಂದ ದೂರವಿರಬೇಕಲ್ಲ ಎಂಬುದು ನನ್ನ ವ್ಯಥೆ. ಆದರೂ ಬಂದದ್ದೆಲ್ಲ ಅನುಭವಿಸದೆ ಬೇರೆ ದಾರಿ ಇಲ್ಲವಲ್ಲ ಅಂತ ಒಲ್ಲದ ಮನಸ್ಸಿನಿಂದ ಅವಳಿಗೆ ವಿದಾಯ ಹೇಳಿ ಕಳುಹಿಸಿದೆವು.
          ಇಂಗ್ಲೀಷ್ನಲ್ಲಿ ಒಂದು ಹೇಳಿಕೆಯಿದೆ "Out of sight is Out of mind" ಅಂತ. ಆದರೆ ಇಲ್ಲಿ ಹಾಗಾಗಲಿಲ್ಲ. ಆಕೆ "ಕಂಗಳಿಂದ ದೂರ ಹೋದಷ್ಟು" ನಮ್ಮ ನಡುವಿನ ಪ್ರೀತಿ ಹೆಚ್ಚಾಯ್ತು. ಅವಳಿಂದ ನಿರಂತರವಾಗಿ ಪತ್ರಗಳು ಬರಲಾರಂಭಿಸಿದವು. ಆ ಕಾಲಕ್ಕೆ ದೂರವಾಣಿ ಬಹಳ ದುಬಾರಿಯಾದ್ದರಿಂದ ಅವಳ ಪತ್ರಕ್ಕಾಗಿ ವಾರಕ್ಕೊಮ್ಮೆ ಅಂಚೆಯವನ ದಾರಿ ಕಾಯುವುದು ನನ್ನ ನಿರಂತರ ಅಭ್ಯಾಸವಾಯಿತು. ರಾಖಿ ಹಬ್ಬದ ದಿನ ಮರೆಯದೇ ಆ ಊರಿನಿಂದ ನಮ್ಮ ಮನೆಗೆ ಬಂದು ನನಗೆ "ರಕ್ಷಾಬಂಧನ" ಕಟ್ಟಿ ಹರಸಿ ಹೋಗುತ್ತಿದ್ದಳು. ಆ ನೆನಪಿನ ಪುಟಗಳನ್ನು ನನ್ನ ಮನದಲ್ಲೇ ಓದುತ್ತಿದ್ದರೆ, ಈಗಲೂ ನನ್ನ ಕಣ್ಣಾಲಿಗಳು ತುಂಬಿ ನಾನು ಟೈಪ್ ಮಾಡುತ್ತಿರುವ ಕೀ-ಬೋರ್ಡ್ ಕಾಣುತ್ತಲೇ ಇಲ್ಲ.
          ಅಂತೂ ನಮ್ಮ ಪದವಿ ಪರೀಕ್ಷೆಗಳು ಮುಗಿದು ನಾವೆಲ್ಲ ಪದವೀಧರರಾದೆವು. ನಾನು ಹಾಗು ಉಳಿದ ೩ ಜನ ಸ್ನೇಹಿತರು ಅದೇ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಗೆ ನೊಂದಾಯಿಸಿದೆವು. ಆದರೆ ಆ ನನ್ನ ಸ್ನೇಹಿತನಿಗೆ ಮೊದಲಿನಿಂದ ವಿದೇಶದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕೆಂಬ ಮಹದಾಸೆ ಇತ್ತು. ಅದರಂತೆಯೆ ಅವನ ಕಠಿಣ ಪ್ರಯತ್ನದ ಫಲವಾಗಿ ಅವನಿಗೆ ಒಂದು ವಿಶ್ವವಿದ್ಯಾಲಯದಲ್ಲಿ ವೇತನ ಸಹ ದೊರೆಯಿತು. ಅದರಂತೆಯೇ ಅವನು ವಿದೇಶಕ್ಕೆ ಪ್ರಯಾಣ ಬೆಳೆಸಿದ. ಅಲ್ಲಿಗೆ ಹೋದ ಕೆಲವೇ ತಿಂಗಳುಗಳಲ್ಲಿ, ತನ್ನ ಗೆಳತಿಯನ್ನು ಬಿಟ್ಟಿರಲಾರದ ಅವನು ಅವಳನ್ನು ಮದುವೆಯಾಗಲು ಅವರ ಮನೆಯವರೊಡನೆ ಪ್ರಸ್ತಾಪಿಸಿ ಮದುವೆಯೂ ಸಹ ನಡೆಯಿತು. ಅವರಿಬ್ಬರು ವಿದೇಶಕ್ಕೆ ಹೊರಡುವ ದಿನವೂ ಬಂದುಬಿಟ್ಟಿತು.
          ಅವಳು ತನ್ನ ಗಂಡನೊಡನೆ ವಿದೇಶಕ್ಕೆ ಹೊರಟುಹೋಗುವಳಲ್ಲ ಎಂದು ನನ್ನ ಮನ ಮೂಕವಾಗಿ ರೋಧಿಸುತ್ತಿತ್ತು. ಬಹುಶಃ ಈ ದೂರದ ದೇಶಕ್ಕೆ ಹೋಗುವ ಅಗಲಿಕೆಯನ್ನು ತಡೆದುಕೊಳ್ಳುವ ಶಕ್ತಿ ನನಗೆ ಕೊಡಲಿ ಎಂದೇ ದೇವರು ಕೆಲವು ವರ್ಷಗಳ ಹಿಂದೆ ಅವಳ ತಂದೆಗೆ ದೂರದೂರಿಗೆ ವರ್ಗಾವಣೆ ಮಾಡಿಸಿ ನನಗೆ ಅವಳಿಂದ ದೂರವಿರುವ ಶಕ್ತಿ ಕೊಟ್ಟಿದ್ದ ಆನಿಸುತ್ತೆ.
          ಒಂದೆಡೆ ನನ್ನ ಗೆಳೆಯನಿಗೆ ತಾನು ಇಷ್ಟಪಟ್ಟ ಗೆಳತಿ ಬಾಳಸಂಗಾತಿಯಾದಳಲ್ಲ ಅಂತ ಸಂತೋಷವಾದರೆ, ಇನ್ನೊಂದೆಡೆ "ಆ ದೇವರು ಕೊಟ್ಟ ತಂಗಿ ಹಾಗು ನನ್ನ ಆಪ್ತ ಸ್ನೇಹಿತ" ಇಬ್ಬರೂ ನನ್ನಿಂದ ದೂರ ಹೋಗುತ್ತಿದ್ದಾರಲ್ಲ ಎಂಬ ದುಖಃ. ಅವರಿಬ್ಬರೂ ಹೊರಡುವ ದಿನ ನಾನು ಪಟ್ಟ ವೇದನೆ ಅದನ್ನು ಅನುಭವಿಸಿದವರಿಗೆ ಗೊತ್ತು. ಅಗಲಿಕೆಯೆಂಬುದು ಎಂಥಹಾ ಕಠಿಣವಾದ ಶಿಕ್ಷೆ ಎಂದು ಅರಿವಾಯ್ತು. ಮನಸಾರೆ ಅವರಿಬ್ಬರಿಗು ಅಭಿನಂದಿಸಿ ನನ್ನ ದುಖಃ ದುಮ್ಮಾನಗಳನ್ನು ಬದಿಗೊತ್ತಿ ಆನಂದದಿಂದ ಅವರನ್ನು ಬೀಳ್ಕೊಟ್ಟೆ. ವಿಮಾನ ನಿಲ್ದಾಣದಲ್ಲಿ ಅವರಿಬ್ಬರು ಕಣ್ಣಿಂದ ಮರೆಯಾಗುವವರೆಗೂ ಕೈಬೀಸುತ್ತಾ ನಿಂತಿದ್ದೆ. ನಮ್ಮದು ತುಂಬಿದ ಮನೆ. ಎಲ್ಲಾ ಇದ್ದರು ಅವರಿಬ್ಬರನ್ನು ಕಳುಹಿಸಿ ನಮ್ಮ ಮನೆಗೆ ಬಂದಾಗ ಎಲ್ಲೆಲ್ಲೂ ಶೂನ್ಯ ಆವರಿಸಿರುವಂತೆ ಭಾಸವಾಗುತ್ತಿತ್ತು.
          ಅವರು ಅಲ್ಲಿಗೆ ಹೋದ ನಂತರ ಅಲ್ಲಿಂದ ಅವಳು ಬರೆದ ಮೊದಲ ಪತ್ರ ನನಗೆ!!! ತಿಂಗಳಿಗೊಮ್ಮೆ ನಮ್ಮಿಬ್ಬರ ನಡುವೆ ಪತ್ರಗಳ ವಿನಿಯೋಗವಾಗುತ್ತಿತ್ತು. ಅಲ್ಲಿನ ಅವರ ಜೀವನ, ಹೊಸ ದೇಶ, ಭಾಷೆ, ಸಂಸ್ಕೃತಿಗಳ ಬಗ್ಗೆ ವಿವರವಾಗಿ ಬರೆಯುತ್ತಿದ್ದಳು. ಈಗಲೂ ಕೆಲವೊಮ್ಮೆ ಅವಳ ಆ ಪತ್ರಗಳನ್ನು ಓದುತ್ತಿದ್ದರೆ ನನ್ನ ಮನಸ್ಸು ೨೦ ವರ್ಷಗಳ ಹಿಂದಿನ ಗತಕಾಲಕ್ಕೆ ಓಡಿ ಹೋಗಿರುತ್ತೆ. ನಾನು ಸ್ನಾತಕೋತ್ತರ ಪದವಿ ಮುಗಿಸಿ ಕೆಲಸ ಹುಡುಕುವ ನಿರುದ್ಯೋಗಿಯಾಗಿದ್ದಾಗ ಆ ನನ್ನ ತಂಗಿ ನನಗೆ ಅಲ್ಲಿಂದ ಹಣದ ಸಹಾಯ ಸಹಾ ಮಾಡಿದ್ದಳು!! ಅಂಚೆ ಮೂಲಕ ಪತ್ರ ರವಾನೆಯ ಯುಗ ಕಡಿಮೆಯಾಗಿ, ಆಧುನಿಕ ಮಾಹಿತಿ ತಂತ್ರಜ್ನ್ಯಾನದ ಕೊಡುಗೆಯಾಗಿ ಈ-ಸಂದೇಶಗಳ ಯುಗ ಆರಂಭವಾದಂತೆ ಗಣಕಯಂತ್ರ ನಮ್ಮಿಬ್ಬರ ನಡುವೆ ಬಾಂಧವ್ಯ ಬೆಸೆಯುವ ಕೊಂಡಿಯಾಯಿತು. ಆಗೊಮ್ಮೆ ಈಗೊಮ್ಮೆ ದೂರವಾಣಿಯಲ್ಲಿ ಆಕೆ ಕರೆ ಮಾಡಿದಾಗ ಗಂಟೆಗಟ್ಟಲೆ ಹರಟೆ ಹೊಡೆಯುತ್ತಿದ್ದೆವು,
          ನಮ್ಮ ಪರಿಚಯವಾಗಿ ಇಲ್ಲಿಗೆ ಸುಮಾರು ೨೦ ವರ್ಷಗಳೇ ಕಳೆದಿವೆ. ಅಂದಿನಿಂದ ನನಗೆ ತಂಗಿಯಿಲ್ಲವೆಂಬ ಕೊರತೆಯನ್ನು ಹೋಗಲಾಡಿಸಿ, ತನ್ನ ಹೃದಯದಲ್ಲಿ ಒಡಹುಟ್ಟಿದವರಿಗಿಂತ ಹೆಚ್ಚಿನ ಸ್ಥಾನವನ್ನು ಕೊಟ್ಟಿರುವ ಆ "ದೇವರು ಕೊಟ್ಟ ತಂಗಿ"ಗೆ ನಾನು ಸದಾ ಚಿರಋಣಿ! ಅನೇಕ ಜನ ವಿದೇಶಕ್ಕೆ ಹೋಗಿ ಒಂದೆರೆಡು ವರ್ಷಗಳಿದ್ದರೆ ತಮ್ಮತನವನ್ನೇ ಮರೆತು ಅವರ ನಡೆ-ನುಡಿಗಳನ್ನೆ ಬದಲಿಸಿಕೊಂಡು ಬಿಡ್ತಾರೆ. ಆದರೆ ೧೫ ವರ್ಷಗಳಿಂದ ಅಲ್ಲೇ ನೆಲೆಸಿದ್ದರು ಆಕೆಗೆ ನನ್ನ ಮೇಲಿರುವ ಪ್ರೀತಿ-ವಿಶ್ವಾಸ ಎಳ್ಳಷ್ಟೂ ಕಡಿಮೆಯಾಗಿಲ್ಲ. ಪ್ರತೀ ವರ್ಷ ನನ್ನ ಜನ್ಮ ದಿನ, ರಕ್ಷಾ ಬಂಧನ ದಿನ, ವಿವಾಹ ವಾರ್ಷಿಕೋತ್ಸವ ದಿನದಂದು ಮರೆಯದೆ ಕರೆ ಮಾಡಿ ನಮಗೆ ಶುಭ ಹಾರೈಸುವುದನ್ನು ಮರೆತಿಲ್ಲ!
          ಮೊನ್ನೆಯ ದಿನ ನಮ್ಮ ಮನೆಯಲ್ಲಿನ ಕಪಾಟಿನಲ್ಲಿದ್ದ ಹಳೆಯ ಪುಸ್ತಕಗಳು, ನೆನಪಿನ ಕಾಣಿಕೆಗಳು ಮೊದಲಾದವನ್ನು ಸ್ವಚ್ಚಗೊಳಿಸುತ್ತಿರುವಾಗ ಆಕೆ ಬರೆದ ಸುಮಾರು ೪೦-೫೦ ಪತ್ರಗಳು ಸಿಕ್ಕಿದವು. ಆ ಪತ್ರಗಳನ್ನೆಲ್ಲ ಓದುತ್ತಿದ್ದಾಗ ಈ ಲೇಖನವನ್ನು ಬರೆದು ನಿಮ್ಮೆಲ್ಲರೊಡನೆ ನನ್ನ ಜೀವನದ ಈ ಸವಿ ಅನುಭವವನ್ನು ಹಂಚಿಕೊಳ್ಳಬೇಕೆಂದು ನಿರ್ಧರಿಸಿ ಬರೆಯಲಾರಂಭಿಸಿದೆ.
ಅವಳನ್ನು ನೆನಪಿಸಿಕೊಂಡಾಗಲೆಲ್ಲ ನನ್ನ ಮನದಾಳದಲ್ಲಿ ಹೊರಹೊಮ್ಮುವುದು ಅಣ್ಣ - ತಂಗಿಯರ ನಡುವೆ ಬಾಂಧವ್ಯ ಬೆಸೆಯುವ ಈ ಸುಮಧುರ ಗೀತೆ.....
"ಸಾವಿರ ಜನುಮದಲೂ ನಮ್ಮ ಬಂಧ ಬೆಳೆದಿರಲಿ, ಆನಂದ ತುಂಬಿರಲಿ........."
-ಸತೀ
 
 

ಗೋರ್ಕಲ್ಲಿಗೆ ಗುಡಿ ಮಂದಿರ ನೂರು!

 ಗೋರ್ಕಲ್ಲಿಗೆ ಗುಡಿ ಮಂದಿರ ನೂರು!

ದಿನಬೆಳಗಾಗುವುದರಲಿ ತಲೆಯೆತ್ತಿ ನಿಲ್ಲುತ್ತಿವೆ ರಸ್ತೆಗೊಂದು ದೇವಮಂದಿರ
ಅದರ ಒಳ ಹೊರಗಿನ ದೃಶ್ಯಾವಳಿಗಳಲಿರುವ ಅಂತರ ಅಜಗಜಾಂತರ!!!
ಬೆಂಕಿ-ಬಿರುಗಾಳಿಗೂ ಜಗ್ಗದ ದೇವಮೂರ್ತಿಯ ವಾಸ ಹತ್ತಾರು ಅಂತಸ್ತಿನ ಗೋಪುರದೊಳಗೆ,
ಆ ಗುಡಿಕಟ್ಟಿದ ನೂರಾರು ಮಂದಿ ನಿಲಲು ನೆಲೆಯಿಲ್ಲದಿರುವರು ಪಾಳು ಮಂಟಪದ ಕೆಳಗೆ||
ಗುಡಿಯೊಳಗೆ ಮಂಗಳಾರತಿ ತಟ್ಟೆಗೆ ನೂರು,ಸಾವಿರ ರೂಪಾಯಿಗಳ ದಕ್ಷಿಣೆ,
ಗುಡಿಯೊರಗೆ ಕುಳಿತು ಭಿಕ್ಷೆ ಎನುವವರಿಗೆ ಚಿಲ್ಲರೆ ಹಾಕಲೂ ನಿರಾಕರಣೆ||
ತಿನಲಾಗದವನಿಗೆ ಹಾಲು,ಜೇನು,ಮೊಸರು, ತುಪ್ಪ ಸಕ್ಕರೆಯ ನೈವೇದ್ಯ,
ಹಸಿದ ಬಡಬಗ್ಗರಿಗೆ ಎರಡು ಹೊತ್ತು ತಿನಲು ಅನ್ನವಿಲ್ಲದಷ್ಟೂ ದಾರಿದ್ರ್ಯ||
ದೇವಿಯ ಮೂರ್ತಿಗೆ ಹೊದೆಸುವರು ಜರತಾರಿ ಸೀರೆ ಕುಪ್ಪಸಗಳನು ಶ್ರೀಮಂತ ಸ್ತ್ರೀಯರು
ಪೂರ್ತಿ ಮಾನ ಮುಚ್ಚಲಾರದೆ ಹರಕು ಸೀರೆ ಕುಪ್ಪಸದಲಿ ಕುಳಿತಿರುವರು ಬಡ ಮಹಿಳೆಯರು||
ಗುಡಿಯೊಳಗೆ ಬೆಚ್ಚಗೆ ಕುಳಿತಿರುವ ಓ ದೇವರೆ
ಕೇಳಿಸದೆ ನಿನಗೆ ದೀನ ದುರ್ಬಲರ ಹಸಿವಿನ ಕರೆ
ಬಂದು ನೆಲೆಸಿ ನಿನ್ನ ಅಂಧ ಭಕ್ತರ ಹೃದಯದೊಳಗೆ
ಜಾಗೃತಗೊಳಿಸಬಾರದೆ ದಾನ ಧರ್ಮ ಮಾಡುವ ಬಗೆ!!!!!
-ಸತೀ