Wednesday, October 20, 2010

ಅಂತರ್ಜಾಲದಲಿ ಸಿಕ್ಕ ಆತ್ಮೀಯ ಅಣ್ಣ

   ನಾವು ಕುಳಿತಿದ್ದ ವಿಮಾನ ಮುಂಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು, ಮಧ್ಯರಾಷ್ಟ್ರಗಳನು ಹಾರಿ, ಅಟ್ಲಾಂಟಿಕ್ ಸಾಗರವನ್ನು ದಾಟಿ ಅಮೇರಿಕಾದ ನೆಲದಲ್ಲಿ ಇಳಿಯಿತು. ವಿಸಾ, ಪಾಸ್ ಪೋರ್ಟ್, ಇತರ ಕಾಗದಗಳ ತಪಾಸಣೆಯಾಗಿ ಆ ದೇಶದೊಳಗೆ ಕಾಲಿರಿಸುವ ಅನುಮತಿ ದೊರೆಯಿತು. ನಂತರ ಅಲ್ಲಿಂದ ಇನ್ನೊಂದು ಸಣ್ಣ ವಿಮಾನವನೇರಿ ಲುಪಬೇಕಾದ ನಿಲ್ದಾಣ ತಲುಪಿ, ಟಾಕ್ಸಿಯನಿಡಿದು ನಮಗಾಗಿ ಕಾದಿರಿಸಿದ ಹೋಟೆಲನು ತಲುಪಿದೆವು. ಎರಡು ದಿನಗಳಿಂದ ಸತತವಾದ ಪ್ರಯಾಣ, ಪೂರ್ವ-ಪಶ್ಚಿಮ ದೇಶಗಳ ನಡುವಿನ ಸಮಯದ ಅಂತರ, ದೇಹವನ್ನು ಆಯಾಸಗೊಳಿಸಿದ್ದರೆ, ನನ್ನವರನ್ನೆಲ್ಲಾ ಬಿಟ್ಟು ಇನ್ನು ಎರಡು ವರ್ಷಗಳ ಕಾಲ ವಿದೇಶದ ಆ ಸಂಸ್ಕೃತಿ, ಭಾಷೆ, ನಾಗರೀಕತೆ ಎಲ್ಲವನ್ನು ಅನುಸರಿಸಿ ನಡೆಯಬೇಕಲ್ಲ ಅಂತ ಮನಸ್ಸು ಆಯಾಸಗೊಂಡಿತ್ತು. ದೇಹ ಹಾಗು ಮನಸ್ಸು ಎರಡು ವಿಶ್ರಾಂತಿ ಬಯಸಿತ್ತು. ಕೊಠಡಿಯಲ್ಲಿ ಸಿಕ್ಕ ಬ್ರೆಡ್, ಬಿಸ್ಕತ್ತು, ಹಣ್ಣು, ಕೋಲಾ ಕುಡಿದು ಹಾಸಿಗೆಯಲ್ಲಿ ಉರುಳಿ ಬೆಳಿಗ್ಗೆ ಎದ್ದಾಗ ೭.೦೦ ಘಂಟೆಯಾಗಿತ್ತು.
          ಅಂತೂ ಇಂತೂ ಒಂದು ವಾರದಲ್ಲಿ ದೇಹ ಹಾಗು ಮನಸ್ಸು ಎರಡು ಹೊಸ ಸಮಯ, ಜನ, ಭಾಷೆ, ಸಂಸ್ಕೃತಿಗೆ ಹೊಂದಿಕೊಂಡು ದೈನಿಕ ಚಟುವಟಿಕೆ ಆರಂಭವಾಯಿತು. ಹೊಸ ಕೆಲಸ ಉತ್ಸಾಹ ತರುತ್ತಿತ್ತು. ಬೆಳಗಿನಿಂದ ಸಂಜೆವರೆಗೂ, ಸೋಮವಾರದಿಂದ ಶುಕ್ರವಾರದವರೆಗಿನ ಸತತ ದುಡಿತಕ್ಕೆ ಪ್ರತಿಫಲ ಎಂಬಂತೆ ಶನಿವಾರ-ಭಾನುವಾರದ ಎರಡು ದಿನಗಳ ರಜೆ ಮನಸ್ಸಿಗೆ ನವಚೈತನ್ಯ ತುಂಬುತ್ತಿತ್ತು. ಮೊದಲ ೫-೬ ತಿಂಗಳು, ರಜೆ ದಿನಗಳಲ್ಲಿ ಹತ್ತಿರದ ನೋಡಬೇಕಾದ ಸ್ಥಳಗಳನ್ನೆಲ್ಲಾ ನೋಡಿಯಾಯಿತು. ಊರಿನಿಂದ ತಂದಿದ್ದ ಎಲ್ಲಾ ಕನ್ನಡ ವಿಡಿಯೋ ಚಿತ್ರಗಳನ್ನು ತಿರುಗಿ ತಿರುಗಿ ನೋಡಿಯಾಯಿತು. ಮನಸ್ಸು ಮೆಲ್ಲಗೆ ನಮ್ಮ ಭಾಷೆ, ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದೇನೇನೋ ಎಂಬಂತೆ ವರ್ತಿಸತೊಡಗಿತು. ಏನಾದರು ಬದಲಾವಣೆ ಬೇಕು ಅನ್ನಿಸತೊಡಗಿತು. ಅಂತಹ ಸಮಯದಲ್ಲಿ ನನಗೆ ಸಹಾಯಕ್ಕೆ ಬಂದಿದ್ದು ಎಲ್ಲೆಡೆ ಬೃಹದಾಕಾರವಾಗಿ ಬೆಳೆದು, ವಿಶ್ವವನ್ನೆ ತನ್ನ ಹಿಡಿತದೊಳಗೆ ಇಟ್ಟುಕೊಂಡಿರುವ ವಿವಿಧ ಅಂತರ್ಜಾಲ ತಾಣಗಳು. ಸರಿಯಾದ ರೀತಿಯಲ್ಲಿ ಅಂತರ್ಜಾಲವನ್ನು ಉಪಯೋಗಿಸಿಕೊಂಡರೆ ಅದರಿಂದ ಆಗುವ ಅನುಕೂಲಗಳನು ವರ್ಣಿಸಲಸಾದ್ಯ. ಅದೇ ರೀತಿ ಅದನ್ನು ದುರುಪಯೋಗಪಡಿಸಿಕೊಂಡು ಅದರಿಂದ ಹಾಳಾಗಿರುವ ಎಷ್ಟೊ ವ್ಯಕ್ತಿಗಳ ನಿದರ್ಶನ ಕೂಡ ಉಂಟು.

 ನಾನೋ ಮೊದಲಿನಿಂದ ಕನ್ನಡ ಭಾಷೆ, ಸಾಹಿತ್ಯ, ಚಿತ್ರಗೀತೆ, ಭಾವಗೀತೆಗಳ ಪ್ರೇಮಿ. ಕನ್ನಡದ ಅಂತರ್ಜಾಲ ತಾಣಗಳನ್ನು ನಿರಂತರವಾಗಿ ನೋಡುವುದು ನನ್ನ ಒಂದು ಅಭ್ಯಾಸವಾಗಿ ಹೋಯಿತು. ಹಾಗೆ ನೋಡುವಾಗ ಒಂದು ತಾಣ, ಕನ್ನಡ ಚಲನಚಿತ್ರದ ಹಾಡುಗಳು, ಸನ್ನಿವೇಶಗಳಿಗಾಗಿಯೇ ಸೀಮಿತವಾಗಿದ್ದುದನ್ನು ಕಂಡೆ. ಅನೇಕ ಜನ ವಿಧ್ಯಾಬ್ಯಾಸಕ್ಕಾಗಿ, ಕೆಲಸಕ್ಕಾಗಿ, ವ್ಯಾಪಾರಕ್ಕಾಗಿ ತಾಯ್ನಾಡನ್ನು ಬಿಟ್ಟು ವಿಶ್ವದೆಲ್ಲೆಡೆ ಹರಡಿದ್ದಾರೆ. ಅವರೆಲ್ಲ ಬಿಡುವಿನ ವೇಳೆಯಲ್ಲಿ ಇಂತಹ ಅಂತರ್ಜಾಲ ತಾಣಗಳಿಗೆ ಭೇಟಿ ಮಾಡಿ ನಮ್ಮ ಭಾಷೆ, ಸಂಸ್ಕೃತಿಗಳ ನಿಕಟ ಸಂಪರ್ಕ ಇಟ್ಟುಕೊಂಡು ಸಂತೋಷದಿಂದಿರುವುದನ್ನು ಕಂಡೆ. ಅಂತಹ ಜನರಿಗಾಗಿಯೇ, ಅನೇಕ ಕನ್ನಡಾಭಿಮಾನಿಗಳು, ಕೆಲವು ಅಂತರ್ಜಾಲ ತಾಣಗಳಲ್ಲಿ ತಮ್ಮದೆ ಆದ ಪುಟ ತೆರೆದು ಅದರಲ್ಲಿ ಕನ್ನಡ ಭಾವಗೀತೆಗಳು, ಭಕ್ತಿಗೀತೆಗಳು, ಚಿತ್ರಗೀತೆಗಳು, ಹಾಸ್ಯ ಸನ್ನಿವೇಶಗಳು ಮುಂತಾದವುಗಳನ್ನು ಹಾಕಿ ತಮ್ಮ ಕೈಲಾದ ಅಳಿಲು ಸೇವೆಯನ್ನು ಹೊರದೇಶದಲ್ಲಿರುವ ನಮ್ಮಂತವರಿಗಾಗಿ ಮಾಡುತ್ತಿರುವುದರ ಅರಿವಾಯ್ತು. ಅಂತವರ ಪುಟಗಳನು ಭೇಟಿ ಮಾಡೋದು, ಅವರು ಹಾಕಿರುವ ಹಾಡುಗಳನ್ನು ನೋಡೋದು, ಕೇಳೊದು, ಹಾಕಿದವರಿಗೆ  ಧನ್ಯವಾದ ತಿಳಿಸೋದು ನನ್ನ ನಿರಂತರ ಅಭ್ಯಾಸಗಳಲ್ಲೊಂದಾಯ್ತು.
          ಹೀಗೆ ನನ್ನ ವಿಧ್ಯಾಭ್ಯಾಸ, ಸಂಶೋಧನೆ, ಸೆಮಿನಾರ್ ಎಲ್ಲಾ ಒಂದೆಡೆ ಸಾಗುತ್ತಿದ್ದರೆ, ಬಿಡುವಿನಲ್ಲಿ ಈ ಅಂತರ್ಜಾಲ ತಾಣಗಳ ಮೂಲಕ ಕೆಲವು ಗೆಳೆಯ ಗೆಳತಿಯರ ಪರಿಚಯವೂ ಆಗ ತೊಡಗಿತು. ಅದರಲ್ಲಿ ಒಬ್ಬ ವ್ಯಕ್ತಿ ತಮ್ಮ ಪುಟದಲ್ಲಿ ಅಸಂಖ್ಯಾತ ಹಳೆಯ ಕನ್ನಡ ಚಿತ್ರಗೀತೆಗಳು, ಚಿತ್ರ ಸನ್ನಿವೇಶಗಳನ್ನು ಹಾಕಿರುವುದು ನನ್ನ ಗಮನಕ್ಕೆ ಬಂತು. ಆಕಾಶವಾಣಿಯಲ್ಲೂ, ದೂರದರ್ಶನದ ಅನೇಕ ಚಾನಲ್ಗಳಲ್ಲೂ ಸಿಗದಂತಹ ೬೦, ೭೦, ೮೦ರ ದಶಕದ ಸಾಕಷ್ಟು ಸುಮಧುರ ಹಾಡುಗಳನ್ನು ವೀಕ್ಷಿಸುವ ಸುಯೋಗ ಅವರ ಪುಟದಲ್ಲಿ ಸಿಕ್ಕಿತು. ಅವರ ಮುಖಪುಟದಲ್ಲಿ ಅವರಿಗೆ ಅಭಿನಂದನೆ ತಿಳಿಸಿ ವಿಶ್ವದೆಲ್ಲೆಡೆಯಿಂದ ಬಂದಿದ್ದ ಲೆಕ್ಕವಿಲ್ಲದ್ದಷ್ಟು.ಸಂದೇಶಗಳನು ಹಾಗು ಆ ಸಂದೇಶಗಳಿಗೆಲ್ಲಾ ಇವರು ಕಳುಹಿಸಿರುವ ಮರುಸಂದೇಶಗಳನು ಕಂಡು ಬೆರಗಾಗಿ ಹೋದೆ.
 ಹೀಗೆ ಒಮ್ಮೆ ಅವರ ಪುಟ ನೋಡುವಾಗ ಎಷ್ಟೊ ವರ್ಷಗಳಿಂದ ನೋಡಬೇಕೆಂದು ಕಾಯುತ್ತಿದ್ದ ೬೦ರ ದಶಕದ ಚಿತ್ರವೊಂದರ ಹಾಡು ಅವರ ಚಾನಲ್ ನಲ್ಲಿ ಕಂಡಾಗ ಮನಸ್ಸು ಉಲ್ಲಾಸದಿಂದ ಕುಣಿಯಿತು. ಆ ಹಾಡನ್ನು ಬಹಳಷ್ಟು ಭಾರಿ ವೀಕ್ಷಿಸಿ, ಅದನ್ನು ಹಾಕಿದ ಆ ವ್ಯಕ್ತಿಗೆ ಮನಸಾರೆ ಒಂದು ಅಭಿನಂದನಾ ಪತ್ರ ಕಳಿಸಿ ಆ ವಿಷಯವನ್ನು ಅಲ್ಲೇ ಮರೆತು ಬಿಟ್ಟೆ.

          ಕಾಲ ಯಾರಿಗು ಹೇಳದೆ ಕೇಳದೆ ತನ್ನಷ್ಟಿಗೆ ತಾನೆ ಜರುಗುತ್ತಿತ್ತು. ಕೆಲವು ತಿಂಗಳುಗಳ ನಂತರ ನನ್ನ ಈ-ಸಂದೇಶ ಪೆಟ್ಟಿಗೆಯಲ್ಲಿನ, ಅಪರಿಚಿತ ವ್ಯಕ್ತಿಯ ಒಂದು ಸಂದೇಶ ನನ್ನ ಗಮನ ಸೆಳೆಯಿತು. ಅದನ್ನು ತೆರೆದಾಗ ಅದರಲ್ಲಿದ್ದ ಒಕ್ಕಣೆ ಇಷ್ಟು "ನಮಸ್ಕಾರ,  ನಾನು ಹಾಕಿದ್ದ ಹಾಡು ನಿಮಗೆ ಮೆಚ್ಚಿಗೆಯಾಗಿರುವುದು ನನಗೆ ಸಂತೋಷ ತಂದಿದೆ. ನಿಮಗೆ ಇಷ್ಟವಾದ ಇನ್ನೂ ಅನೇಕ ಹಾಡುಗಳನ್ನು ಹಾಕಲು ನಾನು ಪ್ರಯತ್ನಿಸುವೆ. ತಡವಾದ ಉತ್ತರಕ್ಕೆ ಕ್ಷಮಿಸಿ, ಧನ್ಯವಾದಗಳು". ಆ ಸಂದೇಶವನ್ನು ನೋಡಿ ನನಗೆ ಈಗಲೂ ಇಂತಹ ಪ್ರಾಮಾಣಿಕ ವ್ಯಕ್ತಿಗಳು ಇರ್ತಾರ ಅಂತ ಸಂದೇಹವಾಯ್ತು. ಅಲ್ಲಿಂದ ಆರಂಭವಾಯ್ತು ನನ್ನ ಹಾಗು ಅವರ ನಡುವೆ ಅಂತರ್ಜಾಲದ ಮೂಲಕ ಸಂದೇಶ/ ವಿಚಾರ ವಿನಿಮಯ. ನನಗೆ ಚಿಕ್ಕಂದಿನಿದಲೂ ಪ್ರಿಯವಾದ, ಎಲ್ಲೂ ಸಿಗದ ಅನೇಕ ಹಾಡುಗಳ ಪಟ್ಟಿಯನ್ನೇ ಅವರಿಗೆ ಕಳುಹಿಸಿದೆ. ಅವರಂತೂ ಸಾಕಷ್ಟು ಪ್ರಯತ್ನಿಸಿ, ಸಾಧ್ಯವಾದಷ್ಟು ಹಾಡುಗಳನ್ನು ಕೆಲವೇ ದಿನಗಳಲ್ಲಿ ಹಾಕಿಬಿಡ್ತಾ ಇದ್ದರು. ಈ ರೀತಿಯಿಂದ ನಮ್ಮ ನಡುವೆ ಒಂದು ಆತ್ಮೀಯ ಬಾಂಧವ್ಯ ಬೆಳೆಯ ತೊಡಗಿತು.
          ನಾನು ಸ್ವಲ್ಪ ಭಾವಜೀವಿ. ವಿದೇಶದಲ್ಲಿನ ನನ್ನ ಅನುಭವಗಳನ್ನು ತಾಯ್ನಾಡಿನಲಿರುವ ನನ್ನ ಸ್ನೇಹಿತರು, ಕುಟುಂಬದವರೊಡನೆ ಈ-ಸಂದೇಶ, ಪತ್ರಗಳ ಮೂಲಕ ಹಂಚಿಕೊಳ್ಳುವುದು ನನ್ನ ಒಂದು ಹವ್ಯಾಸ. ಆರಂಭದಲ್ಲಿ ಕೆಲವರಿಂದ ನನ್ನ ಸಂದೇಶಗಳಿಗೆ ಮರುಸಂದೇಶಗಳು ಬರುತ್ತಿತ್ತು. ಕ್ರಮೇಣ ಎಲ್ಲ ಕಡಿಮೆಯಾಯಿತು. ನಿರೀಕ್ಷಿಸಿದ್ದ ಉತ್ತರ ಬಾರದಿದ್ದಾಗ ನನಗೆ ನಿರುತ್ಸಾಹ, ಕೋಪ ಎಲ್ಲ ಬರುತ್ತಿತ್ತು. ಆಗ ನನ್ನ ಭಾವನೆಗಳನು ಸ್ಪಂದಿಸುವ, ನನ್ನ ಪತ್ರಗಳಿಗೆ ಮರುಸಂದೇಶ ಕಳುಹಿಸುವ ಒಬ್ಬ ಸ್ನೇಹಿತನ ಸಂಗಕ್ಕಾಗಿ ಮನ ಹಾತೊರೆಯುತ್ತಿತ್ತು. ಅದಕ್ಕೆ ಸರಿಹೊಂದುವಂತೆ ಕೇವಲ ಅಂತರ್ಜಾಲದಲ್ಲಿ ಪರಿಚಯವಾಗಿ, ಒಬ್ಬರನ್ನೊಬ್ಬರು ನೋಡದೆ, ಮಾತನಾಡದಿದ್ದರು ಆಗಾಗ ಆ ಹೊಸ ಸ್ನೇಹಿತನಿಂದ ಬರುತ್ತಿದ್ದ ಈ-ಸಂದೇಶಗಳನ್ನು ನೋಡಿ ನನಗೆ ಮರಳುಗಾಡಿನಲ್ಲಿ ಅಲೆಯುವಾಗ ಓಯಾಸಿಸ್ ಸಿಕ್ಕಷ್ಟೇ ಆನಂದವಾಗುತ್ತಿತ್ತು.
ಹೀಗೆ ಕಾಲಚಕ್ರ ಉರುಳುವಾಗ, ಒಮ್ಮೆ ಆ ವ್ಯಕ್ತಿಗೆ ನನ್ನ ನಿಜವಾದ ಹೆಸರು, ಮಾಡುತ್ತಿರುವ ಹುದ್ದೆ ಎಲ್ಲದರ ಬಗ್ಗೆ ತಿಳಿಸಬೇಕೆಂಬ ಮನಸ್ಸಾಗಿ ಅಂತೆಯೇ ಒಂದು ಸಂದೇಶ ಕಳುಹಿಸಿದೆ. ನನ್ನ ಬಗ್ಗೆ ತಿಳಿದ ಅವರು ಸಹ ತಮ್ಮ ಹೆಸರು, ಕಾರ್ಯ ಕ್ಷೇತ್ರ, ಅವರ ಕುಟುಂಬದ ಬಗ್ಗೆ ಮಾಹಿತಿ ನೀಡಿದರು. ಆನಂತರ ನಮ್ಮ ದೂರವಾಣಿ ಸಂಖ್ಯೆಗಳು ಪರಸ್ಪರವಾಗಿ ದೊರೆತವು. ಅಸಂಖ್ಯಾತ ಹಳೆಯ ಹಾಡುಗಳನ್ನು ಅಂತರ್ಜಾಲದಲ್ಲಿ ಹಾಕಿ ಹೆಸರಾಗಿದ್ದ ಅವರನ್ನು ಯಾರೋ ಬರೀ ಸಿನಿಮಾ ಹುಚ್ಚು ಇರುವ ವ್ಯಕ್ತಿ ಇರಬೇಕು ಎಂದುಕೊಂಡಿದ್ದ ನನಗೆ ಅವರ ಬಗ್ಗೆಯ ಮಾಹಿತಿ ಕಂಡು ಅವರ ಮೇಲಿದ್ದ ಅಭಿಮಾನ ದ್ವಿಗುಣಗೊಂಡಿತು. ಅವರು ಡಾಕ್ಟರೇಟ್ ಮುಗಿಸಿ, ಪ್ರತಿಷ್ಟಿತ ಕಂಪನಿಯಲ್ಲಿ ಗಣ್ಯ ಹುದ್ದೆಯನ್ನಲಂಕರಿಸಿ ಬಹಳ ವರ್ಷಗಳ ಕಾಲ ವಿದೇಶದಲ್ಲಿ ನೆಲೆಸಿ ಈಗ ತಾಯ್ನಾಡಿಗೆ ಮರಳಿರುವರು ಎಂದು ತಿಳಿದಾಗ ಅವರ ಮೇಲಿನ ವಿಶ್ವಾಸ, ಪ್ರೀತಿ, ಆತ್ಮೀಯತೆ ಎಲ್ಲಾ ಜಾಸ್ತಿ ಆಗ ತೊಡಗಿತು.

                    ಮೊದಲ ದಿನ ಅವರ ಧ್ವನಿಯನ್ನು ದೂರವಾಣಿಯಲ್ಲಿ ಕೇಳಿ ನನ್ನ ಮನದಲ್ಲಿ ವರ್ಷಋತುವಿನ ಕಾರ್ಮೋಡ ಕಂಡ ನವಿಲು ನರ್ತಿಸುವಂತಹ ಅನುಭವವಾಯಿತು.  ಮಾತುಗಳಲ್ಲಿನ ಆ ಆತ್ಮೀಯತೆ, ಜೇನಿನಲ್ಲಿ ಅದ್ದಿ ತೆಗೆದಂತಹ ನಗು ಬೆರೆತ ಆ ಧ್ವನಿ, ಪದಗಳ ಉಚ್ಚಾರಣೆ, ಮುಗ್ಧತೆ ಅಬ್ಬಬ್ಬಾ!!!
ನಂತರದ ನಮ್ಮ ಭೇಟಿ ವಿಡಿಯೋ ಕಾನ್ಫರೆನ್ಸ್ ಮೂಲಕ. ಆ ವ್ಯಕ್ತಿಯನ್ನು ನನ್ನ ಗಣಕಯಂತ್ರದ ಪರದೆಯ ಮೇಲೆ ನೋಡಿದಾಗ ನನ್ನ ಕಂಗಳಲ್ಲಿ ಆನಂದಭಾಷ್ಪ!! ವಿದೇಶದಲ್ಲಿದ್ದ ನನಗೆ, ತಮ್ಮ ಹಾಡುಗಳ ಮೂಲಕ ನನ್ನ ತಾಯ್ನಾಡಿಗೆ ಸಾವಿರಾರು ದೂರದಲ್ಲಿದ್ದರೂ ಬಹಳ ಹತ್ತಿರದಲ್ಲೇ ಇದ್ದಂತ ಭಾವನೆ ತರಿಸಿದ್ದ ಆ ಸ್ನೇಹಮಯಿಗೆ ಮನಃಪೂರ್ವಕವಾಗಿ ವಂದಿಸಿದೆ. ಜೊತೆಗೆ ತಮ್ಮ ಮಡದಿ ಮಕ್ಕಳನ್ನೂ ಪರಿಚಯಿಸಿದರು. ಅವರೊಡನೆ ಮಾತನಾಡುವಾಗ ನಾನು ಅವರನ್ನು ಸಾರ್ ಸಾರ್ ಎಂದು ಕೂಗುತ್ತಿದ್ದಾಗ ಅದನ್ನು ಆಕ್ಷೇಪಿಸಿ ಹೆಸರಿಡಿದು ಕೂಗುವಂತೆ ಹೇಳಿದರು. ನನಗಿಂತ ೭-೮ ವರ್ಷಗಳ ಹಿರಿಯರಾದ ಅವರನ್ನು ಹೆಸರಿಡಿದು ಕರೆಯಲು ನನ್ನ ಮನ ಒಪ್ಪಲಿಲ್ಲ. ಆತ್ಮೀಯತೆಯಿಂದ "ಅಣ್ಣಾ" ಎನ್ನೋಣ ಅನ್ನಿಸ್ತಿದೆ ಅಂದೆ. ಅವರು ಏನೂ ಮಾತನಾಡಲಿಲ್ಲ. "ಮೌನಂ ಸಮ್ಮತಿ ಲಕ್ಷಣಂ" ಅಂದುಕೊಂಡು ಹಾಗೆ ಕರೆಯಲಾರಂಭಿಸಿದೆ.
          ನಾನು ಬಹಳವಾಗಿ ಬೇಕೆಂದು ಪರಿತಪಿಸುತ್ತಿದ್ದ ಒಬ್ಬ ಆತ್ಮೀಯ ಅಣ್ಣ, ಬಂಧು, ಸ್ನೇಹಿತನನ್ನು ಒಟ್ಟಾಗಿ ಅವರಲ್ಲಿ ಕಂಡೆ. ಅವರು ನನ್ನ ಪಾಲಿಗೆ "ದೇವರು ಕೊಟ್ಟ ಅಣ್ಣ" ನಾದರು. ನನ್ನ ಕುಟುಂಬದವರಿಂದ, ಸ್ನೇಹಿತರಿಂದ ನಿರೀಕ್ಷಿಸುತ್ತಿದ್ದ ಎಲ್ಲಾ ಪ್ರತ್ಯುತ್ತರಗಳು ಈ ಅಣ್ಣನಿಂದ ಬರುತ್ತಿದ್ದವು. ಅದಕ್ಕಾಗಿಯೇ ನಾನು ಒಮ್ಮೆ ಅವರಿಗೆ "ಅಣ್ಣಾ ನೀವು ನನಗೆ ಕೆಲವು ವಿಷಯಗಳಲ್ಲಿ ನನ್ನ ಒಡಹುಟ್ಟಿದವರಿಗಿಂತ ಮಿಗಿಲು ಎಂದೆ". ಅದಕ್ಕವರು, ಬಹಳ ದೊಡ್ಡ ಮಾತು, ನನ್ನ ಈ ಅಲ್ಪ ಕಾರ್ಯವನ್ನು ಮೆಚ್ಚಿಕೊಂಡಿರೋದು ನಿಮ್ಮ ದೊಡ್ಡ ಗುಣ. ನನ್ನ ಕಾರ್ಯಕ್ಕೆ ನಾನು ಬಹಳ ದಿನಗಳಿಂದ ಹುಡುಕುತ್ತಿದ್ದ ಒಬ್ಬ ತಮ್ಮ ಸಿಕ್ಕಿದ. ಅದಕ್ಕಿಂತಾ ದೊಡ್ಡ ಬಹುಮಾನ ಸಿಗಲು ಸಾಧ್ಯವೆ ಇಲ್ಲ ಅಂದ್ರು". ಇದನ್ನಲ್ಲವೇ "ತುಂಬಿದ ಕೊಡ ತುಳುಕೊಲ್ಲ" ಅನ್ನೋದು!
          ಇನ್ನೊಂದು ವಿಶೇಷ ಅಂದ್ರೆ, ಆ ಅಣ್ಣ ವಾಸಿಸೋದು ಸಹ ನನ್ನ ಹುಟ್ಟೂರಿನಲ್ಲೆ! ಅವರ ಮನೆ ವಿಳಾಸ ಎಲ್ಲ ಕೊಟ್ಟು ಊರಿಗೆ ಬಂದಾಗ ಭೇಟಿ ಆಗೋಣ ಅಂತ ತಿಳಿಸಿದ್ರು. ಆ ಅಣ್ಣನ ಭೇಟಿಗಾಗಿ ನನ್ನ ಮನ ಹಾತೊರೆಯುತ್ತಿತ್ತು.
          ಈ ನಡುವೆಯೇ ನನ್ನ ಸಂಶೋಧನೆ ಎಲ್ಲ ಮುಗಿದು, ವಿಶ್ವವಿದ್ಯಾಲಯ ಗೊತ್ತುಪಡಿಸಿದ್ದ ಗುರಿಯನ್ನು ಮುಟ್ಟಿ, ಮಾಡಬೇಕಾದ ಎಲ್ಲ ಕೆಲಸಗಳನ್ನು ಮುಗಿಸಿ ಆನಂದದಿಂದ ತಾಯ್ನಾಡಿಗೆ ಮರಳಿದೆ.
          ಮನೆಗೆ ಬಂದ ೩-೪ ದಿನಗಳಲ್ಲೇ ಅಣ್ಣನಿಂದ ದೂರವಾಣಿ ಬಂತು. ನಾಳೆ ಸಂಜೆ ನಿಮ್ಮ ಮನೆಗೆ ಅಪ್ಪಾಜಿ, ಅಮ್ಮನನ್ನು, ನಿಮ್ಮನ್ನು ನೋಡಲು ಬರ್ತೇನೆ ಅಂದ್ರು. ಅವರ ವಿಶ್ವಾಸಕ್ಕೆ ಮೂಕನಾಗಿ, ಸಂತೋಷದಿಂದ ಅವರಿಗೆ ಆಹ್ವಾನವಿತ್ತೆ.
          ದೊಡ್ಡ ದೊಡ್ಡ ನಗರಗಳಲ್ಲಿ ಸಂಜೆಯ ವೇಳೆ ಕಾರಿನಲ್ಲಿ ನಿಗದಿತ ವೇಳೆಯಲ್ಲಿ ನಿಗದಿತ ಸ್ಥಳ ತಲುಪಲು ಹರಸಾಹಸ ಪಡಬೇಕು. ಅಣ್ಣ ಕೆಲಸ ಮಾಡುತ್ತಿದ್ದ ಕಚೇರಿಯಿಂದ ನಮ್ಮ ಮನೆಗೆ ಸುಮಾರು ೨ ಘಂಟೆಗಳ ಪ್ರಯಾಣ. ದಟ್ಟವಾದ ವಾಹನ ಸಂಚಾರ ಹಾಗು ಅಸ್ಥವ್ಯಸ್ಥವಾದ ರಸ್ತೆಗಳ ಮೇಲೆ ಕಡಿಮೆಯೆಂದರೆ ೩ ಘಂಟೆಯಾದರು ಬೇಕು. ಅದನ್ನೆಲ್ಲ ಅನುಭವಿಸಿ ನಮ್ಮ ಮನೆಯ ಮುಂದೆ  ಬಂದು ನಿಂತ ಕಾರಿನಿಂದ ಇಳಿದ ಅವರನ್ನು ನೋಡಿ ನನಗಾದ ಸಂತೋಷ ಅಷ್ಟಿಷ್ಟಲ್ಲ. ಮಮತೆ-ಪ್ರೀತಿ, ವಾತ್ಸಲ್ಯದಿಂದ ಅವರನ್ನು ಆಲಂಗಿಸಿ ಒಳಗೆ ಆಹ್ವಾನಿಸಿದೆ. ಮನೆಗೆ ಬಂದಾಕ್ಷಣ ನಮ್ಮ ಮಾತಾಪಿತರ ಕಾಲಿಗೆರಗಿ ನಮಸ್ಕರಿಸಿದರು. ಅವರ ಸರಳ ಸಜ್ಜನತೆಗೆ ನನ್ನ ಎದೆ ಉಬ್ಬಿಬಂತು. ಅವರನ್ನು ಪ್ರತ್ಯಕ್ಷವಾಗಿ ಕಂಡಿದ್ದು ಇದೇ ಮೊದಲಾದರು, ಎಷ್ಟೊ ವರ್ಷಗಳಿಂದ ಚಿರಪರಿಚಿತರೇನೋ ಎಂಬಂತೆ ಭಾಸವಾಯಿತು. ಎಲ್ಲರೊಡನೆ ಪ್ರೀತಿಯಿಂದ ಮಾತನಾಡುತ್ತ ಊಟ ಮಾಡಿದರು. ನಮ್ಮನ್ನು ಅವರ ಮನೆಗೆ ಆಹ್ವಾನಿಸಿ ಎಲ್ಲರಿಗೂ ಶುಭ ಕೋರಿ ಹಿಂದಿರುಗಿದರು. ಕನಸೋ ಇದು ನನಸೋ ಇದು...ನನಗೆ ಗೊತ್ತಾಗಲಿಲ್ಲ. "ಹೇಳಲಾರೆನು, ತಾಳಲಾರೆನು ನನ್ನ ಮನಸಿನ ಭಾವನೆ..." ಎಂಬ ಯಾವುದೋ ಹಳೆಯ ಹಾಡು ಮನದಾಳದಲ್ಲಿ ಗುನುಗುತ್ತಿತ್ತು.

ನಂತರದ ನಮ್ಮ ಭೇಟಿ  ೨ ವಾರಗಳ ಬಳಿಕ ನಾನು ಅವರ ಮನೆಗೆ ಹೋದಾಗ. ನನ್ನ ಮನಸ್ಸು ಅವರನ್ನು ಅಣ್ಣನೆಂದು ಸ್ವೀಕರಿಸಿದಂತೆ, ಅವರ ಮಡದಿ ನನ್ನ ಅತ್ತಿಗೆಯಾದರು. ಅವರ ಮಕ್ಕಳಿಗೆ ನನ್ನನ್ನು "ಚಿಕ್ಕಪ್ಪ" ಅಂತಲೇ ಪರಿಚಯಿಸಿದರು. ಅವರ ಮಾತಾಪಿತರಿಗೆ ನನ್ನನ್ನು "ನಿಮ್ಮ ಕೊನೆಯ ಮಗ" ಎಂದು ಪರಿಚಯಿಸಿದಾಗ ಮೌನದಿಂದ ಮೂಕನಾದೆ. ಅವರೆಲ್ಲರೊಡನೆ ಕಳೆದ ಆ ಕೆಲವು ಘಂಟೆಗಳು ನನ್ನ ಜೀವನದಲ್ಲಿ ಕಳೆದ ಕೆಲವು ಅಮೂಲ್ಯ ಕ್ಷಣಗಳಲ್ಲೊಂದು. ಅಣ್ಣ ಅವರ ಕೆಲಸದ ಬಗ್ಗೆ,ತಾವು ಮನೆಯಲ್ಲಿ ನಡೆಸುವ ಚಿಕ್ಕಪುಟ್ಟ ಸಂಶೋಧನೆಗಳ ಬಗ್ಗೆ, ಬಿಡುವಿನ ವೇಳೆಯಲ್ಲಿ ಅಂತರ್ಜಾಲಕ್ಕೆ ಹಾಡುಗಳನ್ನು ಹಾಕುವ ಬಗ್ಗೆ ವಿವರಿಸಿದರು. ಅತ್ತಿಗೆ ತಯಾರಿಸಿದ ರುಚಿಕರವಾದ ಭೋಜನವುಂಡು, ಅವರೆಲ್ಲರ ಚಿತ್ರಗಳನ್ನು ನನ್ನ ಕ್ಯಾಮೆರ ಕಣ್ಣಿನಿಂದ ಸೆರೆ ಹಿಡಿದು ಅವರಿಂದ ಬೀಳ್ಕೊಂಡು ಮನೆಗೆ ಬಂದೆ.
          ಈಗ ನಾನು ಕೆಲಸ ಮಾಡುತ್ತಿರುವುದು ಬೇರೆ ರಾಜ್ಯದಲ್ಲಿ. ನನ್ನ ಸಂಸಾರದೊಡನೆ ನನ್ನ ಹುಟ್ಟೂರನ್ನು ಬಿಟ್ಟು ನಾನು ಕೆಲಸ ಮಾಡುವ ಊರಿಗೆ ಹಿಂದಿರುಗಿದೆ. ಆಗಾಗ್ಗೆ ಅಣ್ಣನೊಡನೆ ದೂರವಾಣಿಯಲ್ಲಿ ಮಾತು ಕಥೆಯಾಗುತ್ತೆ. ನಮ್ಮ ಕೆಲಸಗಳ ಬಗ್ಗೆ, ಹಳೆಯ ಕನ್ನಡ ಸಿನಿಮಾಗಳ/ ಹಾಡುಗಳ ಬಗ್ಗೆ, ಪ್ರಚಲಿತ ವಿದ್ಯಮಾನಗಳ ಸುತ್ತಾ ನಮ್ಮ ಚರ್ಚೆ ಗಿರಕಿ ಹೊಡೆಯುತ್ತೆ. ಯಾವಾಗಲಾದರೊಮ್ಮೆ ಮನಸ್ಸಿಗೆ ಬೇಸರವಾದಾಗ ಅವರಿಗೆ ಫೋನಾಯಿಸಿ ಮಾತನಾಡಿದರೆ ನನ್ನ ಮನದಲ್ಲಿ ಮತ್ತೆ ಉಲ್ಲಾಸ ಮೂಡುತ್ತದೆ. ಆಗ ನನಗೆ ನೆನಪಾಗುವುದು "ಎಲ್ಲಾದರು ಹೋಗು, ಮರೆಯಾಗು, ಮೊರೆ ಹೋಗು, ನಿನ್ನನು ಬಿಡದೋ ಬಾಂಧವ್ಯ, ಬಿಡದೋ ಮಮತೆಯ ಬಾಂಧವ್ಯ" ಎಂಬ ಮಧುರವಾದ ಹಾಡು. ಹಳೆಯಾದಷ್ಟು ದ್ರಾಕ್ಷಾರಸ (ವೈನ್) ಹುದುಗಿ ಅದರ ರುಚಿ ಹೆಚ್ಚಿದಂತೆ, ದಿನದಿಂದ ದಿನಕ್ಕೆ ಅಣ್ಣನ ಮೇಲಿನ ಅಭಿಮಾನ, ಪ್ರೀತಿ, ಆತ್ಮೀಯತೆ ಹೆಚ್ಚುತ್ತಲೇ ಇದೆ.
          ಹೀಗೆ ಕಾಲಚಕ್ರ ಉರುಳುತ್ತಿದೆ. "ಅಂತರ್ಜಾಲದಲ್ಲಿ ಅನಿರೀಕ್ಷಿತವಾಗಿ ದೊರೆತ ಈ ಅಣ್ಣ" ನೊಡನೆಯ ಬಾಂಧವ್ಯ ಚಿರವಾಗಿರಲಿ ಎಂದು ಸದಾ ಆ ದೇವರಲ್ಲಿ ಬೇಡುತ್ತೇನೆ. ರಕ್ತಸಂಬಂಧ, ಸ್ನೇಹಸಂಬಂಧ ಮುಂತಾದ ಸಂಬಂಧಗಳಿಗಿಂತ ಮಿಗಿಲಾದ ಒಂದು ವಿಶಿಷ್ಟವಾದ ಸಂಬಂಧ ಇದೆ ಅಂತ ಈ ಅಣ್ಣ ಸಿಕ್ಕ ನಂತರ ಸ್ವತಃ ಅನುಭವವಾಯಿತು. ಆ ಅಣ್ಣನಿಗಾಗಿ ನನ್ನ ಮನದಲ್ಲಿ ಮೂಡಿದ ಈ ಸಾಲುಗಳನ್ನು ಬರೆಯುತ್ತ ಇಲ್ಲಿಗೆ ನಿಲ್ಲಿಸುವೆ...

"ಎಂದೋ ಒಮ್ಮೆ ಅಂತರ್ಜಾಲದಲ್ಲಿ ನಿಮ್ಮ ಹಾಡುಗಳನ್ನು ನೋಡಿದೆ
ಈ-ಸಂದೇಶದಲ್ಲಿನ ನಿಮ್ಮ ಸ್ನೇಹಭರಿತ ವಾಕ್ಯಗಳಿಂದ ಆನಂದಗೊಂಡೆ
ವಿಡಿಯೋದಲ್ಲಿ ನಿಮ್ಮ ನಿಶ್ಕಲ್ಮಶ, ವಾತ್ಸಲ್ಯಭರಿತ ಕಂಗಳನ್ನು ಕಂಡು ಭಾವಪರವಶನಾದೆ
ಎದುರಿನಲ್ಲೇ ಪ್ರತ್ಯಕ್ಷವಾದಾಗ ನಿಮ್ಮ ಸರಳ ಸಜ್ಜನತೆ ಕಂಡು ಮಾತುಬಾರದ ಮೂಕನಾದೆ"
 
- ಸತೀ

5 comments:

  1. ಎ೦ತಹ ಸ್ನೇಹದ ಒಡನಾಟ............ ನಿಜವಾಗಿಯೂ ಹೇಳಬೇಕೆ೦ದರೆ ಅ೦ತಹ ನಿರೀಕ್ಷೆಯಲ್ಲಿ ನಾನು ಕೂಡ ಒಬ್ಬ. ಹೃದಯದ ಭಾವನೆಗಳನ್ನು ಹ೦ಚಿಕೊಳ್ಳುವ ಸ್ನೇಹಿತರು,ಆಪ್ತರು ಸಿಕ್ಕಾಗ ನಿಜವಾಗಿಯೂ ಸ್ವರ್ಗದಲ್ಲೇ ಇದ್ದೇವೆ೦ಬ ಭಾವನೆ. ನಿಮ್ಮ ಈ ಅ೦ಕಣ ಓದಿ ನಿಜಕ್ಕೂ ನಾನು ಭಾವುಕನಾದೆ. ಇ೦ತಹ ಮಧುರ ನೆನಪನ್ನು ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು.

    ReplyDelete
  2. ರವೀ,
    ನಿಮ್ಮ ಕಾಮೆಂಟ್ ಓದಿ ನಾನು ಸಹ ಭಾವುಕನಾದೆ. ನನ್ನ ಈ ಬರಹ ನಿಮಗೆ ಮೆಚ್ಚುಗೆಯಾಗಿ ಅದರಿಂದ ಸಂತೋಷವಾಗಿದ್ದರೆ ನನಗೂ ಅಷ್ಟೇ ಸಂತೋಷ. ನಿಮ್ಮಂತಹ ಸ್ನೇಹಿತರು ಸಿಕ್ಕಿರುವುದು ನನ್ನ ಪುಣ್ಯವೇ ಸರಿ. ನಿಮ್ಮ ಸಲಹೆಗಳು ನನ್ನ ಬರವಣಿಗೆ ಸುಧಾರಿಸಲು ಸಹಾಯಕಾರಿಯಾಗಿರುತ್ತವೆ. ದಯವಿಟ್ಟು ಮುಂದುವರೆಸಿ.
    ನಿಮ್ಮವ
    ಸತೀಶ

    ReplyDelete
  3. ನಿಮ್ಮ ಲೇಖನ ಓದಿ ತುಂಬಾ ಸಂತೋಷವಾಗದೆ ಸತೀಶ್. ಶ್ರೀಧರ

    ReplyDelete
  4. ಕನಸಲ್ಲೂ ನೆನೆಸದ ಸುoದರವಾದ ಸoಭoದಗಳು,
    ಎಲ್ಲೆಯಿಲ್ಲದ ಪ್ರೀತಿಯು,
    ಇದಕ್ಕಿoತ ಜೀವನದಲ್ಲಿ ಇನ್ನೇನು ಸಿಗಲು ಸಾಧ್ಯ?

    ReplyDelete
  5. ನಿಮ್ಮ ಆ ಸ್ನೇಹದ ಸಿಂಚನ ಭಾವನಾತ್ಮಕ ಲೋಕವನ್ನು ಮೀರಿ ಸಹೋದರತ್ವವನ್ನು ತಳೆದ ಒಡನಾಟವನ್ನು ಕೇಳಿ ಮನ ಮಿಡಿಯಿತು...
    ನಿಮ್ಮ ಜೀವನದಲ್ಲಿ ಒಬ್ಬ ಸಹೋದರ ಸಿಕ್ಕಂತೆ ನನಗೆ ಒಬ್ಬಳು ಸಹೋದರಿ ಸಿಕ್ಕಿದ್ದಾಳೆ...

    ReplyDelete